ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ಸಾವಿಗೂ ಮುನ್ನ ಗೂಗಲ್ನಲ್ಲಿ ಸಾವು ಹಾಗೂ ಮಾನಸಿಕ ಸ್ಥಿಮಿತತೆಗೆ ಸಂಬಂಧಿಸಿದ ಪದಗಳ ಬಗ್ಗೆ ಶೋಧ ನಡೆಸಿದ್ದರು ಎಂಬ ಮಾಹಿತಿಯನ್ನು ಮುಂಬೈ ಪೊಲೀಸರು ಬಹಿರಂಗಪಡಿಸಿದ್ದಾರೆ.
ನೋವು ರಹಿತ ಸಾವು (ಪೇನ್ ಲೆಸ್ ಡೆತ್), ಮನೋವ್ಯಾಧಿ (ಸ್ಕಿಜೋಫ್ರೇನಿಯಾ) ಹಾಗೂ ಮನಸ್ಸಿನ ಚಂಚಲತೆ (ಬೈಪೋಲಾರ್ ಡಿಸಾರ್ಡರ್) ಮುಂತಾದ ಪದಗಳನ್ನು ಗೂಗಲ್ನಲ್ಲಿ ಸರ್ಚ್ ಮಾಡಿದ್ದರು ಎಂದು ಮುಂಬೈ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮುಂಬೈ ಪೊಲೀಸ್ ಕಮಿಷನರ್ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. 2020ರಿಂದ ಜೂನ್ 2020ರವರೆಗೆ ಸುಶಾಂತ್ ಅವರ ಬ್ಯಾಂಕ್ ವ್ಯವಹಾರಗಳ ಬಗ್ಗೆ ತನಿಖೆ ಮಾಡಲಾಗಿದೆ. ಸುಮಾರು 14.5ಕೋಟಿ ರೂಪಾಯಿ ಅವರ ಖಾತೆಗೆ ಜಮಾ ಆಗಿದ್ದು, 4 ಕೋಟಿ ರೂಪಾಯಿ ಫಿಕ್ಸೆಡ್ ಡೆಪಾಸಿಟ್ ಕೂಡಾ ಇತ್ತು ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಬಿಹಾರ ಹಾಗೂ ಮುಂಬೈ ಪೊಲೀಸರು ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿದ್ದು, ಅಸಹಕಾರದ ಪ್ರಶ್ನೆ ಇಲ್ಲಿ ಬರುವುದಿಲ್ಲ ಎಂದು ಮುಂಬೈ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.