ಸೂರತ್: ತಕ್ಷಶಿಲ ಆರ್ಕೇಡ್ನಲ್ಲಿ ಅಗ್ನಿ ದುರಂತ ಸಂಭವಿಸಿ ಕೋಚಿಂಗ್ ಕ್ಲಾಸ್ಗೆ ಬಂದಿದ್ದ 19 ವಿದ್ಯಾರ್ಥಿಗಳೂ ಸೇರಿ 20 ಮಂದಿ ಸಜೀವ ದಹನವಾದ ದಾರುಣ ಘಟನೆ ದೇಶವನ್ನೇ ದುಃಖಕ್ಕೀಡುಮಾಡಿದೆ.
ಇನ್ನು ಘಟನೆಯನ್ನು ಕಣ್ಣಾರೆ ಕಂಡ ಮಂದಿ ಭೀಕರ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಮಧ್ಯಾಹ್ನ ಸುಮಾರು 2 ಗಂಟೆಗೆ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯ ಕೆನ್ನಾಲಿಗೆ ಹೆಚ್ಚುತ್ತಿದ್ದಂತೆ, ಅಲ್ಲಿಯೇ ಇದ್ದ ವಿದ್ಯಾರ್ಥಿಗಳು ಕಾಪಾಡಿ... ಕಾಪಾಡಿ ಎಂದು ಅಂಗಲಾಚುತ್ತಿದ್ದರು ಎಂದು ಪಕ್ಕದ ಕಟ್ಟಡದಲ್ಲಿದ್ದ ವ್ಯಕ್ತಿ ಹೇಳಿಕೊಂಡಿದ್ದಾರೆ.
ತನ್ನ ಕಚೇರಿ ಪಕ್ಕದ ಬಿಲ್ಡಿಂಗ್ನಲ್ಲಿ ಇದ್ದದ್ದರಿಂದ ಬೆಂಕಿ ನಂದಿಸುವ ಸಾಧನ ಬಳಸಿ, ನೀರು ಎರಚಲು ನನ್ನ ಕೈಲಾದಷ್ಟು ಪ್ರಯತ್ನಪಟ್ಟೆ. ಆದರೆ, ಅಸಹಾಯಕನಾಗಿಬಿಟ್ಟೆ. ಕಟ್ಟಡದೊಳಗಿಂದ ಮಕ್ಕಳ ಆರ್ತನಾದ ನನ್ನ ಮನಸ್ಸಲ್ಲಿ ಉಳಿದುಬಿಟ್ಟಿದೆ. ಆ ಸಂದರ್ಭದಲ್ಲಿ ಮಕ್ಕಳನ್ನು ಹೇಗೆ ರಕ್ಷಿಸಲಿ ಎಂದು ನನಗೆ ತಿಳಿಯಲೇ ಇಲ್ಲ ಎಂದು ಹೇಳಿದ್ದಾರೆ.
ಅಗ್ನಿಶಾಮಕ ದಳದ ನಿರ್ಲಕ್ಷ್ಯದ ಬಗ್ಗೆ ಆರೋಪ ಮಾಡಿದ ಅವರು, ಸರಿಯಾದ ಸಮಯಕ್ಕೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಂಡಿರಲಿಲ್ಲ. ಟ್ಯಾಂಕರ್ನಲ್ಲಿ ನೀರು ಇರಲಿಲ್ಲ. ವಾಹನದಿಂದ ಏಣಿಯನ್ನೂ ತೆಗೆಯಲಾಗಲಿಲ್ಲ ಎಂದರು.
ಈ ಬಗ್ಗೆ ಮತ್ತೊಬ್ಬ ಪ್ರತ್ಯಕ್ಷದರ್ಶಿಯೂ ಆರೋಪ ಮಾಡಿದ್ದು, ಅಗ್ನಿಶಾಮಕ ದಳದ ಬಳಿ ಏನೂ ಇರಲಿಲ್ಲ. 10 ಮಂದಿಯನ್ನು ರಕ್ಷಿಸಲು ನಮ್ಮದೇ ಏಣಿಯನ್ನು ಬಳಸಿದೆವು. ಅವರ ಬಳಿ ನೀರು, ಏಣಿ ಏನೂ ಇರಲಿಲ್ಲ. ಅಗ್ನಿಯ ದರ್ಶನ ಪಡೆಯಲು ಅವರು ಇಲ್ಲಿಗೆ ಬಂದಿದ್ದರೇ? ಎಂದು ಆಕ್ರೋಶದಿಂದ ನುಡಿದ್ದಾರೆ. ಇನ್ನು ಮುನ್ಸಿಪಾಲಿಟಿಯವರಿಗೆ ಈ ಬಗ್ಗೆ ಜವಾಬ್ದಾರಿ ಇಲ್ಲವೇ? ಎಂದೂ ಪ್ರಶ್ನಿಸಿದ್ದಾರೆ.
ಆ ರಸ್ತೆಯಲ್ಲಿ ಸಾಗುತ್ತಿದ್ದಾಗ ಕಟ್ಟಡದಲ್ಲಿ ಬೆಂಕಿ ನೋಡಿದೆ. ತಕ್ಷಣ ಏಣಿ ಮೂಲಕ 10 ವಿದ್ಯಾರ್ಥಿಗಳನ್ನು ರಕ್ಷಿಸಿದೆ. ಅಲ್ಲಿಂದ ಮೂರನೇ ಮಹಡಿಗೆ ಬಂದು, ಅಲ್ಲಿದ್ದ ಕೆಲ ಹುಡುಗರನ್ನು ಬೆಂಕಿಯಿಂದ ರಕ್ಷಿಸಿದೆ. ನಾನು ಕೆಳಗೆ ಬಂದಾಗ, ಹುಡುಗಿಯೊಬ್ಬಳು ಕಟ್ಟಡದಿಂದ ಹಾರಿ, ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಆನಂತರವೂ ಮತ್ತೆ ಕಟ್ಟಡದೊಳಗೆ ನುಗ್ಗಿ, ಮತ್ತಷ್ಟು ಮಕ್ಕಳನ್ನು ಕಾಪಾಡಿದೆ. ಆದರೆ ಉಳಿದವರನ್ನು ರಕ್ಷಿಸಲಾಗಲಿಲ್ಲ ಎಂದು ಮತ್ತೋರ್ವ ಪ್ರತ್ಯಕ್ಷದರ್ಶಿ ನೋವಿನಿಂದ ನುಡಿದಿದ್ದಾರೆ.
ಶುಕ್ರವಾರ ಮಧ್ಯಾಹ್ನ ಸೂರತ್ನ ತಕ್ಷಶಿಲ ಆರ್ಕೇಡ್ನಲ್ಲಿ ಶಾರ್ಟ್ ಸರ್ಕೂಟ್ನಿಂದ ಅಗ್ನಿ ಅವಘಡ ಸಂಭವಿಸಿತ್ತು. ಕೋಚಿಂಗ್ ಸೆಂಟರ್ಗೆ ಬಂದಿದ್ದ 19 ವಿದ್ಯಾರ್ಥಿಗಳು ಸೇರಿ ಒಟ್ಟು 20 ಮಂದಿ ಬೆಂಕಿಗೆ ಆಹುತಿಯಾಗಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಕೆಲ ವಿದ್ಯಾರ್ಥಿಗಳು ಕಟ್ಟಡದಿಂದ ಹಾರುತ್ತಿರುವ ದೃಶ್ಯಗಳು ಮನಕಲಕುವಂತಿದ್ದವು.