ನವದೆಹಲಿ : ಕೋವಿಡ್ ಪರಿಹಾರಕ್ಕಾಗಿ ಸ್ಥಾಪಿಸಲಾದ ಪಿಎಂ ಕೇರ್ಸ್ ನಿಧಿಯಯಲ್ಲಿ ಸಂಗ್ರಹವಾದ ಹಣವನ್ನು ಎನ್ಡಿಆರ್ಎಫ್ಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಪಿಎಂ ಕೇರ್ಸ್ ಫಂಡ್ಅನ್ನು ಎನ್ಡಿಆರ್ಎಫ್ಗೆ ವರ್ಗಾಯಿಸಲು ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್. ಸುಭಾಷ್ ರೆಡ್ಡಿ, ಮತ್ತು ಎಂ.ಆರ್ ಶಾ ಅವರನ್ನೊಳಗೊಂಡ ನ್ಯಾಯ ಪೀಠ, ಪಿಎಂ ಕೇರ್ಸ್ ಫಂಡ್ನಲ್ಲಿ ಸಂಗ್ರಹಿಸಿದ ಹಣವು ಎನ್ಡಿಆರ್ಎಫ್ ನಿಧಿಗಿಂತ ಸಂಪೂರ್ಣ ಭಿನ್ನವಾಗಿದೆ ಎಂದು ತಿಳಿಸಿದೆ. ಅಲ್ಲದೆ, ಕೋವಿಡ್ ನಿರ್ವಹಣೆಗಾಗಿ ರಾಷ್ಟ್ರೀಯ ಯೋಜನೆ ರೂಪಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕೆಂಬ ಅರ್ಜಿದಾರರ ಮನವಿಗೆ, ಸದ್ಯ ಸರ್ಕಾರ ರೂಪಿಸಿರುವ ಯೋಜನೆಗಳು ಕೋವಿಡ್ ನಿರ್ವಹಣೆಗೆ ಸಾಕು ಎಂದು ಅಭಿಪ್ರಾಯಪಟ್ಟಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಪಿಎಂ ಕೇರ್ಸ್ ಫಂಡ್ ಕುರಿತು ವಿವಿಧ ರೀತಿಯಲ್ಲಿ ಕೊಂಕು ನುಡಿಯುತ್ತಿದ್ದ ರಾಹುಲ್ ಗಾಂಧಿಯವರಿಗೆ ತೀರ್ಪು ಸರಿಯಾದ ಹೊಡೆತ ನೀಡಿದೆ. ರಾಹುಲ್ ಗಾಂಧಿ ಮತ್ತು ಅವರ ಸಹವರ್ತಿಗಳ ದುರುದ್ದೇಶಪೂರಿತ ಪ್ರಯತ್ನಗಳ ಹೊರತಾಗಿಯೂ ಸತ್ಯ ಗೆದ್ದಿದೆ. ಪಿಎಂ ಕೇರ್ಸ್ ನಿಧಿಗೆ ಸಹಾಯಧನ ನೀಡಿದ ಜನ ಸಾಮಾನ್ಯರ ವಿರುದ್ಧದ ರಾಹುಲ್ ಗಾಂಧಿಯವರ ಅಸಮಧಾನ ಇದರಿಂದ ಕೊನೆಗೊಂಡಿದೆ ಎಂದು ಹೇಳಿದ್ದಾರೆ.
ಗಾಂಧಿ ಕುಟುಂಬವು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್ಆರ್ಎಫ್) ಯನ್ನು ದಶಕಗಳಿಂದ ತಮ್ಮ ವೈಯುಕ್ತಿಕ ಆಸ್ತಿ ತರ ಪರಿಗಣಿಸಿತ್ತು. ಅಲ್ಲದೆ, ಬಡ ಜನರು ಕಷ್ಟ ಪಟ್ಟು ಸಂಪಾದಿಸಿದ ಹಣವವಾದ ಪಿಎಂಎನ್ಆರ್ಎಫ್ ಫಂಡ್ನ್ನು ತಮ್ಮ ಕುಟುಂಬ ಟ್ರಸ್ಟ್ಗಳಿಗೆ ವರ್ಗಾಯಿಸಿದೆ ಎಂದು ನಡ್ಡಾ ಆರೋಪಿಸಿದ್ದಾರೆ.
ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಪ್ರತಿಕ್ರಿಯಿಸಿ, ಸುಪ್ರೀಂ ಕೋರ್ಟ್ ತೀರ್ಪು ಪಿಎಂ ಕೇರ್ಸ್ ನಿಧಿಯ ಕುರಿತು ಇದ್ದ ಊಹಾ ಪೋಹಾಗಳಿಗೆ ತೆರೆ ಎಳೆದಿದೆ. ಪಿಎಂ ಕೇರ್ಸ್ ನಿಧಿಗೆ ನೀಡುವ ದೇಣಿಗೆಯನ್ನು ಪಾರದರ್ಶಕವಾಗಿ ನಿರ್ವಹಣೆ ಮಾಡಲಾಗುವುದು ಎಂದಿದ್ದಾರೆ.
ಪಿಎಂ ಕೇರ್ಸ್ ನಿಧಿಯಲ್ಲಿ ಸಂಗ್ರಹವಾದ ಒಟ್ಟು 3,100 ಕೋಟಿ ರೂಪಾಯಿ ಹಣದಲ್ಲಿ 2 ಸಾವಿರ ಕೋಟಿ ರೂಪಾಯಿಯನ್ನು 50 ಸಾವಿರ ವೆಂಟಿಲೇಟರ್ ಖರೀದಿಸಲು ಖರ್ಚು ಮಾಡಲಾಗಿದೆ. ಕೋವಿಡ್ ರೋಗಿಗಳ ತುರ್ತು ಅಗತ್ಯತೆಗಳನ್ನು ಪೂರೈಸಲು ಈ ವೆಂಟಿಲೇಟರ್‌ಗಳನ್ನು ಬಳಸಲಾಗುತ್ತದೆ. ವಲಸೆ ಕಾರ್ಮಿಕರ ಆರೈಕೆಗಾಗಿ ಈ ನಿಧಿಯಿಂದ ಒಂದು ಸಾವಿರ ಕೋಟಿ ರೂಪಾಯಿಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ಕೋವಿಡ್ ಲಸಿಕೆ ಅಭಿವೃದ್ಧಿಗೆ 100 ಕೋಟಿ ರೂಪಾಯಿ ನೀಡಲಾಗಿದೆ ಎಂದು ಸಚಿವ ರವಿಶಂಕರ್ ಪ್ರಸಾದ್ ಮಾಹಿತಿ ನೀಡಿದರು.
ಪಿಎಂ ಕೇರ್ಸ್ ನೋಂದಾಯಿತ ನಂಬಿಕಸ್ಥ ನಿಧಿಯಾಗಿದೆ. ಅದರ ಕಾನೂನು ನಿಯಮಗಳು ಮತ್ತು ನಿರ್ವಹಣೆಯಲ್ಲಿ ಪಾರದರ್ಶಕತೆ ಕಾಪಾಡಲಾಗುತ್ತಿದೆ. ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ರಾಷ್ಟ್ರೀಯ ಸಂಕಲ್ಪವನ್ನು ದುರ್ಬಲಗೊಳಿಸಲು ಪ್ರತಿಪಕ್ಷಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸಚಿವ ಪ್ರಸಾದ್ ಹೇಳಿದರು.