ಹೈದರಾಬಾದ್: ಫಿಫಾ ಹಾಗೂ ವಿಶ್ವ ಆರೋಗ್ಯ ಸಂಘಟನೆ ಕೊರೊನಾ ವಿರುದ್ಧ ಹೊಸ ಅಭಿಯಾನ ಆರಂಭಿಸಿದೆ. ಈ ಅಭಿಯಾನ ವಿಶ್ವದ ಪ್ರಸಿದ್ಧ ಫುಟ್ಬಾಲ್ ಆಟಗಾರರನ್ನು ಒಳಗೊಂಡಿದ್ದು, ಭಾರತದ ಖ್ಯಾತ ಫುಟ್ಬಾಲ್ ಆಟಗಾರ ಸುನೀಲ್ ಛೆಟ್ರಿ ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೊಂದು ವಿಡಿಯೋ ಅಭಿಯಾನವಾಗಿದ್ದು, ಜನರಿಗೆ ಕೊರೊನಾ ಹರಡದಂತೆ ತಡೆಯಲು ಜನರು ಅನುಸರಿಬೇಕಾದ ತಂತ್ರಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. 13 ಭಾಷೆಗಳಲ್ಲಿ ಪ್ರಕಟವಾಗಲಿರುವ ಈ ವಿಡಿಯೋದಲ್ಲಿ 28 ಆಟಗಾರರು ಭಾಗಿಯಾಗಲಿದ್ದಾರೆ.
![sunil chhetri](https://etvbharatimages.akamaized.net/etvbharat/prod-images/6536792_thuma.jpg)
ಡಬ್ಲ್ಯುಎಚ್‌ಒ ಸೂಚಿಸಿದಂತೆ ಕೊರೊನಾದಿಂದ ದೂರವಿರಲು ಐದು ಪ್ರಮುಖ ಸಲಹೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಇವರು ಮಾಡಲಿದ್ದಾರೆ. ಕೈ ತೊಳೆಯುವುದು, ಕೆಮ್ಮುವ ಶಿಷ್ಟಾಚಾರ, ಮುಖವನ್ನು ಮುಟ್ಟದಿರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಮನೆಯಲ್ಲೇ ಇರುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಈ ಆಟಗಾರರು ಮಾಡಲಿದ್ದಾರೆ. ಈ ಅಭಿಯಾನದಲ್ಲಿ ಪ್ರಸ್ತುತ ಆಟಗಾರರ ಜೊತೆಗೆ ಮಾಜಿ ಆಟಗಾರರೂ ಕೂಡಾ ಇರಲಿದ್ದಾರೆ.
![Football players team against corona](https://etvbharatimages.akamaized.net/etvbharat/prod-images/fifa-1_2503newsroom_1585118848_1021.jpg)
ಅಭಿಯಾನದಲ್ಲಿ ಭಾಗವಹಿಸುವ ಆಟಗಾರರು: ಸುನಿಲ್ ಛೆಟ್ರಿ, ಲಿಯೋನೆಲ್ ಮೆಸ್ಸಿ, ಕಾರ್ಲಿ ಲಾಯ್ಡ್, ಸಾಮಿ ಅಲ್ ಜಾಬರ್, ಇಕರ್ ಕ್ಯಾಸಿಲಾಸ್, ಅಲಿಸನ್ ಬೆಕರ್, ಎಮ್ರೆ ಬೆಲೊಜೊಗ್ಲು, ಜೇರೆಡ್ ಬೊರ್ಗೆಟ್ಟಿ, ಜಿಯಾನ್ಲುಗಿ ಬಫನ್, ಯೂರಿ ಜೋರ್ಕೆಫ್, ಮಿಡೋ, ಮೈಕೆಲ್ ಓವನ್, ಪಾರ್ಕ್ ಜಿ-ಸಂಗ್, ಕಾರ್ಲೆಸ್ ಪುಯೋಲ್, ಸೆಲಿಯಾ ಸಾಸಿಕ್, ಅಸಕೊ ತಕಾಕುರಾ, ಅಯಾ ಟೂರ್, ಜುವಾನ್ ಸೆಬಾಸ್ಟಿಯನ್ ವೆರಾನ್, ಸನ್ ವೆನ್, ಕ್ಸೇವಿ ಹೆರ್ನಾಂಡೆಜ್ ಸೇರಿದಂತೆ ಇನ್ನೂ ಹಲವರು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.