ನವದೆಹಲಿ: ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯವು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಶಶಿ ತರೂರ್‌ಗೆ 2020ರ ಫೆಬ್ರುವರಿ ಮತ್ತು ಮೇ ಒಳಗೆ ಯುಎಇ, ಫ್ರಾನ್ಸ್ ಮತ್ತು ನಾರ್ವೆಗೆ ಪ್ರಯಾಣಿಸಲು ಅನುಮತಿ ನೀಡಿದೆ.
ಪತ್ನಿ ಸುನಂದಾ ಪುಷ್ಕರ್ ಕೊಲೆ ಪ್ರಕರಣದ ಆರೋಪಿಯಾಗಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್, ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ತರೂರ್ ಅವರಿಗೆ ಜಾಮೀನು ನೀಡುವ ವೇಳೆ ನ್ಯಾಯಾಲಯವು ಅನುಮತಿಯಿಲ್ಲದೆ ಆತ ವಿದೇಶ ಪ್ರಯಾಣ ಮಾಡುವಂತಿಲ್ಲ ಎಂದು ಸೂಚಿಸಿತ್ತು. ಹೀಗಾಗಿ ಅವರು ವಿದೇಶಕ್ಕೆ ಪ್ರಯಾಣಿಸುವ ಕುರಿತು ಅನುಮತಿ ಕೋರಿ ಮಂಗಳವಾರ ದೆಹಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದಿಂದ ಅನುಮತಿ ದೊರೆತಿದೆ.
2014ರ ಜನವರಿ 17ರ ರಾತ್ರಿ ನಗರದ ಐಷಾರಾಮಿ ಹೋಟೆಲ್ ಒಂದರಲ್ಲಿ ಸುನಂದ ಪುಷ್ಕರ್ ಶವವಾಗಿ ಪತ್ತೆಯಾಗಿದ್ದರು. ಈ ಕುರಿತು ವಿಚಾರಣೆ ನಡೆಸಿದ ಪೊಲೀಸರು ಶಶಿ ತರೂರ್ ಮೇಲೆ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿರುವ ಆರೋಪದ ಮೇಲೆ ಕೇಸು ದಾಖಲಿಸಿದ್ದರು.