ನವದೆಹಲಿ : ಕೊರೊನಾ ಲಾಕ್‌ಡೌನ್ ವೇಳೆ ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಸಹಾಯ ಮಾಡುವ ಸಲುವಾಗಿ ಐಐಟಿ, ಐಐಎಂ ಮತ್ತು ಇತರ ಹೆಸರಾಂತ ಸಂಸ್ಥೆಗಳ ವಿದ್ಯಾರ್ಥಿಗಳು ಪೈಲಟ್ ಯೋಜನೆ ಮತ್ತು ಸಹಾಯವಾಣಿ ಸಂಖ್ಯೆ ಪ್ರಾರಂಭಿಸಿದ್ದಾರೆ.
ಸ್ಟೂಡೆಂಟ್ಸ್ ಫಾರ್ ಇನ್ವಾಲ್‌ವ್ಡ್ ಗವರ್ನೆನ್ಸ್ ಅಂಡ್ ಮ್ಯೂಚುಯಲ್ ಆ್ಯಕ್ಷನ್ (ಸಿಗ್ಮಾ) ಎಂಬ ಸಂಸ್ಥೆಯನ್ನು ವಿದ್ಯಾರ್ಥಿಗಳು ರಚಿಸಿದ್ದಾರೆ. ಇವರಿಗೆ ದೆಹಲಿಯ ಜಿಲ್ಲಾಧಿಕಾರಿ ಅಭಿಷೇಕ್ ಸಿಂಗ್ ಮತ್ತು ಅಧಿಕಾರಿ ದುರ್ಗಾ ಶಕ್ತಿ ನಾಗ್ಪಾಲ್ ಅವರು ಸಹಾಯ ಮಾಡುತ್ತಿದ್ದಾರೆ.
ಕೌಶಲ್ಯರಹಿತ, ಅರೆ-ನುರಿತ ಮತ್ತು ನುರಿತ ಕಾರ್ಮಿಕರನ್ನು ನೇಮಿಸಿಕೊಳ್ಳಲು ಹಾಗೂ ಸಹಾಯ ಮಾಡಲು ಹೆಲ್ಪ್‌ಲೈನ್ ಸಂಖ್ಯೆ 8800883323ನನ್ನು ವಿದ್ಯಾರ್ಥಿಗಳು ಆರಂಭಿಸಿದ್ದಾರೆ ಎಂದು ಪೈಲಟ್ ಯೋಜನೆ ಮತ್ತು ಸಹಾಯವಾಣಿ ಸಂಖ್ಯೆಯ ಬಿಡುಗಡೆಯ ಸಂದರ್ಭದಲ್ಲಿ ಅಭಿಷೇಕ್ ಸಿಂಗ್ ಹೇಳಿದರು.
ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ಥಿಂಕ್-ಟ್ಯಾಂಕ್ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ವಿದ್ಯಾರ್ಥಿ ಸ್ವಯಂಸೇವಕರು, ಸಂಭಾವ್ಯ ಉದ್ಯೋಗದಾತರು ಕಾರ್ಮಿಕರ ಕರೆಗಳನ್ನು ಸ್ವೀಕರಿಸಲಿದ್ದಾರೆ. ಸ್ಥಳೀಯರಿಗೆ ಮತ್ತು ವಲಸೆ ಕಾರ್ಮಿಕರಿಗೆ ಕೆಲಸ ಹುಡುಕಲು ಸಹಾಯ ಮಾಡುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದು ಅನೇಕ ಕೈಗಾರಿಕೆಗಳಲ್ಲಿ ಕಾರ್ಮಿಕರ ಕೊರತೆ ಸಹ ನೀಗಿಸಲಿದೆ.