ವಯನಾಡ್: ಶಾಲೆಯಲ್ಲಿ ಹಾವು ಕಚ್ಚಿ ವಿದ್ಯಾರ್ಥಿನಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಕ ಮತ್ತು ತಾಲೂಕು ವೈದ್ಯಾಧಿಕಾರಿಯನ್ನು ಕೇರಳ ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಎರಡು ದಿನಗಳ ಹಿಂದೆ ವಯನಾಡಿನಲ್ಲಿ ನಡೆದ ಘಟನೆಯಲ್ಲಿ ವಿದ್ಯಾರ್ಥಿನಿ ಶೆಹ್ಲಾ ಮೃತಪಟ್ಟಿದ್ದಳು. ಸರ್, ನನಗೆ ಹಾವು ಕಚ್ಚಿದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಶೆಹ್ಲಾ ಕೇಳಿಕೊಂಡರೂ, ನಿಮ್ಮ ತಂದೆ ಬರುವವರೆಗೂ ಕಾಯಬೇಕು ಎಂದು ಶಿಕ್ಷಕ ತರಗತಿಯಲ್ಲಿ ಪಾಠ ಹೇಳುವುದನ್ನ ಮುಂದುವರಿಸಿದ್ದ. ಅಂದು ಮಧ್ಯಾಹ್ನ 3.10ಕ್ಕೆ ಘಟನೆ ನಡೆದಿತ್ತು. ಶೆಹ್ಲಾ ಈ ಕುರಿತು ಶಿಕ್ಷಕರಿಗೆ ತಿಳಿಸಿದ್ದಳು. ಮಧ್ಯಾಹ್ನ 3.36ಕ್ಕೆ ಶೆಹ್ಲಾ ಅವರ ತಂದೆಗೆ ಮಾಹಿತಿ ನೀಡಲಾಯಿತು.
ಬಳಿಕ ಶಾಲೆಗೆ ಬಂದ ತಂದೆ ತನ್ನ ಮಗಳನ್ನು ಬಾಥರಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ಮತ್ತು ನಂತರ ತಾಲೂಕು ಆಸ್ಪತ್ರೆಗೆ ಕರೆ ತಂದರು. ಈ ಎರಡೂ ಆಸ್ಪತ್ರೆಗಳ ವೈದ್ಯರು ಔಷಧ ಇಲ್ಲ ಎಂದು ಕೊಯಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಕಳುಹಿಸಿಕೊಟ್ಟರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಮೃತಪಟ್ಟಳು.
ಶೆಹ್ಲಾ ಮತ್ತು ಆಕೆಯ ಸಹಪಾಠಿಗಳು ಹಾವು ಕಚ್ಚಿರುವ ವಿಷಯ ತಿಳಿಸಿ ಶೀಘ್ರ ಆಸ್ಪತ್ರೆಗೆ ಕರೆದೊಯ್ಯುವಂತೆ ಶಿಕ್ಷಕರಿಗೆ ಮನವಿ ಮಾಡಿಕೊಂಡಿದ್ದರು. ಆದರೆ, ಇದಕ್ಕೆ ಶಿಕ್ಷಕ ಒಪ್ಪಲಿಲ್ಲ. ತಂದೆ ಇಲ್ಲಿಗೆ ಬರುವವರೆಗೂ ಎಲ್ಲಿಗೂ ಕರೆದೊಯ್ಯುವುದಿಲ್ಲ ಎಂದು ಹೇಳಿದ್ದ.