ಹೈದರಾಬಾದ್: ಚಂದ್ರಯಾನ2 ಯೋಜನೆಯ ಭಾಗವಾದ ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿದುಕೊಂಡಿದ್ದರೂ, ಅದೃಷ್ಟವಿದ್ದರೆ ಮತ್ತ ಸಂಪರ್ಕಕ್ಕೆ ಸಿಗಬಹುದು ಎಂದು ಬಿರ್ಲಾ ಸಂಶೋಧನಾ ಕೇಂದ್ರದ ನಿರ್ದೇಶಕ ಬಿ.ಜಿ. ಸಿದ್ಧಾರ್ಥ್ ತಿಳಿಸಿದ್ದಾರೆ.
ಸದ್ಯದ ಸ್ಥಿತಿಯಲ್ಲಿ ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿದುಕೊಂಡಿರುವುದರಿಂದ ಏನನ್ನೂ ಹೇಳಲಾಗುವುದಿಲ್ಲ. ಚಂದ್ರನ ಮೇಲೆ ಭೂಮಿಯಂತ ವಾತಾವರಣವಿಲ್ಲ ಹಾಗಾಗಿ ಅಲ್ಲಿ ಏನಾಗಿದೆ ಎಂಬುದನ್ನು ಕರಾರುವಕ್ಕಾಗಿ ಹೇಳಲು ಸಮಯ ಬೇಕಾಗುತ್ತದೆ.
ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿದುಕೊಂಡಿದ್ದರೂ ಉಪಗ್ರಹವು ಇನ್ನೂ ಚಂದ್ರನ ಸುತ್ತ ಸುತ್ತುತ್ತಲೇ ಇದೆ. ಅದರ ಮೂಲಕ ನಿಖರವಾಗಿ ಲ್ಯಾಂಡರ್ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ತಿಳಿಯಬಹುದು ಎಂದು ಅವರು ತಿಳಿಸಿದರು.
ಈಗ ಸಂಪರ್ಕ ಕಳೆದುಕೊಂಡಿರುವ ಲ್ಯಾಂಡರ್ ಉತ್ತಮ ಸ್ಥಿತಿಯಲ್ಲಿರುವ ಸಾಧ್ಯತೆಗಳೂ ಇವೆ. ಅದಕ್ಕೆ ಹತ್ತು ಲಕ್ಷದಲ್ಲಿ ಒಂದು ಚಾನ್ಸ್ ಅಂತೂ ಇದೆ. ನಾವು ಅದನ್ನೂ ಮಿಸ್ ಮಾಡಿಕೊಳ್ಳುವಂತಿಲ್ಲ. ಸಂಪರ್ಕ ಕಳೆದುಕೊಂಡಿರುವ ಲ್ಯಾಂಡರ್ ಸೇಫ್ ಆಗಿ ಲ್ಯಾಂಡ್ ಆಗಿರಲೂಬಹುದು ಅದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರಯೋಗದ ಸಮಯದಲ್ಲೂ ಆಗಿತ್ತು:
ವಿಕ್ರಂ ಲ್ಯಾಂಡರ್ ಅನ್ನು ಪ್ರಯೋಗಕ್ಕೆ ಒಳಪಡಿಸುವಾಗಲೂ ಅದು ಒಮ್ಮೆ ಸಂಪರ್ಕ ಕಳೆದುಕೊಂಡಿತ್ತು. ಆ ನಂತರ ಸಿಗ್ನಲ್ ಮರು ಜೋಡಣೆ ಮಾಡಿ ಮತ್ತೆ ಸಂಪರ್ಕಕ್ಕೆ ತೆಗೆದುಕೊಳ್ಳಲಾಯಿತು ಎಂದು ಅವರು ತಿಳಿಸಿದರು.