ನವದೆಹಲಿ: ಅಮೆರಿಕದ ಸ್ವಾತಂತ್ರ್ಯದ ಪ್ರತಿಮೆಗಿಂತ ಗುಜರಾತ್‌ನ ಏಕತಾ ಪ್ರತಿಮೆಗೆ ಹೆಚ್ಚು ಪ್ರವಾಸಿಗರು ಭೇಟಿ ನೀಡಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಮತ್ತು ಏಕತಾ ಪ್ರತಿಮೆಗೆ ಉತ್ತಮ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಎಂಟು ರೈಲುಗಳ ವ್ಯವಸ್ಥೆ ಮಾಡಿದೆ. ದೇಶದ ವಿವಿಧ ಪ್ರದೇಶಗಳಿಂದ ಗುಜರಾತ್‌ನ ಕೆವಾಡಿಯಾವನ್ನು ಸಂಪರ್ಕಿಸಲಿರುವ ಈ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿಸಿದ್ದಾರೆ.
ಬಳಿಕ ಮಾತನಾಡಿದ ಪ್ರಧಾನಿ, ನರ್ಮದಾ ನದಿ ತೀರದಲ್ಲಿರುವ ಏಕತಾ ಪ್ರತಿಮೆಯನ್ನು ಹೊಸ ರೈಲುಗಳ ಮೂಲಕ ಸಂಪರ್ಕಿಸಬಹುದಾಗಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಈಗಾಗಲೇ ಅನೇಕ ಪ್ರವಾಸಿಗರನ್ನು ಹೊಂದಿರುವ ಏಕತಾ ಪ್ರತಿಮೆಯು ಸ್ವಾತಂತ್ರ್ಯದ ಪ್ರತಿಮೆಗಿಂತಲೂ ಹೆಚ್ಚು ಪ್ರವಾಸಿಗರನ್ನು ತನ್ನೆಡೆ ಆಕರ್ಷಿಸಲಿದೆ. ಗುಜರಾತ್‌ನ ಕೆವಾಡಿಯಾ ವಿಶ್ವದ ಅತಿದೊಡ್ಡ ಪ್ರವಾಸಿ ತಾಣವಾಗಿ ಹೊರಹೊಮ್ಮಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಏಕತಾ ಪ್ರತಿಮೆಗೆ ಸಂಪರ್ಕ ವ್ಯವಸ್ಥೆ : 8 ರೈಲುಗಳಿಗೆ ಮೋದಿಯಿಂದ ಹಸಿರು ನಿಶಾನೆ
ಸಂಪರ್ಕವು ಹೆಚ್ಚಾದಂತೆ, ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಜನರು ಕೆವಾಡಿಯಾಕ್ಕೆ ಭೇಟಿ ನೀಡುತ್ತಾರೆ ಎಂದು ಒಂದು ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ. ಪರಿಸರವನ್ನು ಉಳಿಸುವಾಗ ಆರ್ಥಿಕತೆ ಮತ್ತು ಪರಿಸರ ವಿಜ್ಞಾನವನ್ನು ಯೋಜಿತ ರೀತಿಯಲ್ಲಿ ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ಪುಟ್ಟ ಹಾಗೂ ಸುಂದರವಾದ ಕೆವಾಡಿಯಾ ಉತ್ತಮ ಉದಾಹರಣೆಯಾಗಿದೆ. ಎಂಟು ಹೊಸ ರೈಲುಗಳ ಸಂಪರ್ಕವು ಕೆವಾಡಿಯಾ ಜನರ ಜೀವನವನ್ನು ಬದಲಿಸಲಿದೆ. ಇದು ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಮೋದಿ ಹೇಳಿದರು.