ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ರೈಲುಗಳನ್ನು ರದ್ದುಗೊಳಿಸಲು ಅಥವಾ ಒಂದು ಪ್ರಯಾಣದಿಂದ ಇನ್ನೊಂದು ಪ್ರಯಾಣದ ನಡುವಿನ ಸಮಯದ ಅಂತರ ಹೆಚ್ಚಿಸಲು (ಆವರ್ತನವನ್ನು ಕಡಿಮೆ ಮಾಡಲು) ಅಥವಾ ನಿಲುಗಡೆಗಳನ್ನು ಕಡಿಮೆ ಮಾಡಲು ಜಾರ್ಖಂಡ್, ತಮಿಳುನಾಡು, ಒಡಿಶಾ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ರಾಷ್ಟ್ರೀಯ ಸಾರಿಗೆದಾರರನ್ನು ಕೇಳಿಕೊಂಡಿವೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ತಿಳಿಸಿದ್ದಾರೆ.
ವರ್ಚುವಲ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಕುರಿತಂತೆ ನಾವು ರಾಜ್ಯ ಸರ್ಕಾರಗಳಿಂದ ವಿನಂತಿಗಳನ್ನು ಸ್ವೀಕರಿಸುತ್ತಿದ್ದೇವೆ ಎಂದು ಹೇಳಿದರು.
"ಜೂನ್ 29 ರಿಂದ ಜುಲೈ 15ರವರೆಗೆ ರಾಜ್ಯದೊಳಗೆ ಚಾಲನೆಯಲ್ಲಿರುವ 7 ರೈಲುಗಳನ್ನು ರದ್ದುಗೊಳಿಸುವಂತೆ ತಮಿಳುನಾಡು ನಮ್ಮನ್ನು ಕೋರಿತ್ತು. ರಾಜ್ಯಕ್ಕೆ ಹೋಗುವ 5 ರೈಲುಗಳ ಆವರ್ತನವನ್ನು ಕಡಿಮೆ ಮಾಡಲು ಪಶ್ಚಿಮ ಬಂಗಾಳವು ಮನವಿ ಮಾಡಿತ್ತು. ಒಡಿಶಾ ಕೆಲವು ನಿಲ್ದಾಣಗಳನ್ನು ರದ್ದುಗೊಳಿಸುವಂತೆ ವಿನಂತಿಸಿದೆ. ಜಾರ್ಖಂಡ್ ಸರ್ಕಾರವು ಕೋವಿಡ್ನಿಂದ ಕೆಟ್ಟ ಪರಿಣಾಮ ಎದುರಿಸುತ್ತಿರುವ ನಗರಗಳನ್ನು ದಾಟುತ್ತಿದ್ದ ಎರಡು ರೈಲುಗಳನ್ನು ರದ್ದುಗೊಳಿಸುವಂತೆ ವಿನಂತಿಯನ್ನು ಕಳುಹಿಸಿದೆ" ಎಂದು ಯಾದವ್ ಮಾಹಿತಿ ನೀಡಿದ್ದಾರೆ.