ನವದೆಹಲಿ: ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶ್ರೇಯಾಂಕದ ಪ್ರಕಾರ, ಸ್ಟಾರ್ಟ್ಅಪ್ ಸ್ನೇಹಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಗುಜರಾತ್ ಮತ್ತೆ ಅಗ್ರ ಸ್ಥಾನ ಪಡೆದಿದೆ.
ಈಶಾನ್ಯ ರಾಜ್ಯಗಳು ಮತ್ತು ಇತರ ಕೇಂದ್ರಾಡಳಿತ ಪ್ರದೇಶ ಹೊರತುಪಡಿಸಿ ಎಲ್ಲಾ ರಾಜ್ಯಗಳು ಮತ್ತು ಒಂದು ಕೇಂದ್ರ ಪ್ರದೇಶ ದೆಹಲಿಯೊಂದಿಗೆ ಹೊಲಿಕೆ ಮಾಡಿದ್ದು, ಗುಜರಾತ್ ಅಗ್ರ ಸ್ಥಾನ ಪಡೆದುಕೊಂಡಿದೆ.
ಅಸ್ಸೋಂ ಹೊರತುಪಡಿಸಿ ಎಲ್ಲಾ ಈಶಾನ್ಯ ರಾಜ್ಯಗಳಲ್ಲಿ ಮತ್ತು ದೆಹಲಿಯನ್ನು ಹೊರತುಪಡಿಸಿ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರಥಮ ಸ್ಥಾನ ಪಡೆದಿದೆ.
ಒಟ್ಟು 22 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳನ್ನು ಈ ಶ್ರೇಯಾಂಕಕ್ಕಾಗಿ ಪರಿಶೀಲನೆ ಮಾಡಲಾಗಿದೆ.
ಶ್ರೇಯಾಂಕ ಪ್ರಕ್ರಿಯೆಯಲ್ಲಿ ಏಕರೂಪತೆಯನ್ನು ಸ್ಥಾಪಿಸಲು ಮತ್ತು ಪ್ರಮಾಣೀಕರಣವನ್ನು ಖಚಿತಪಡಿಸಿಕೊಳ್ಳಲು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ದೆಹಲಿಯನ್ನು ಹೊರತುಪಡಿಸಿ ಕೇಂದ್ರಾಡಳಿತ ಪ್ರದೇಶಗಳು ಮತ್ತು ಅಸ್ಸೋಂ ಹೊರತುಪಡಿಸಿ ಈಶಾನ್ಯದ ಎಲ್ಲಾ ರಾಜ್ಯಗಳನ್ನು 'ವೈ' ವರ್ಗದಲ್ಲಿ ಇರಿಸಲಾಗಿದ್ದರೆ, ಇತರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ದೆಹಲಿ ವರ್ಗ 'ಎಕ್ಸ್' ವಿಭಾಗದಲ್ಲಿವೆ.
ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸ್ಟಾರ್ಟ್ಅಪ್ ಸ್ನೇಹಿ ವ್ಯವಸ್ಥೆಯನ್ನು ಮತ್ತಷ್ಟು ಉತ್ತೇಜಿಸಲು ಇದು ಸಹಾಯ ಮಾಡುತ್ತದೆ ಎಂದು ಹೇಳಿದರು.
ರಾಜ್ಯಗಳನ್ನು ಉದ್ಯಮಸ್ನೇಹಿಗಳನ್ನಾಗಿ ಉತ್ತೇಜಿಸುವ ಉದ್ದೇಶದಿಂದ ಈ ಸ್ಟಾರ್ಟ್ಅಪ್ ರ‍್ಯಾಂಕಿಂಗ್‌ನ್ನು ಬಿಡುಗಡೆ ಮಾಡುವ ಪರಿಪಾಠವನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಹೊಸ ಹೊಸ ಅನ್ವೇಷಣೆಗಳು, ಉದ್ಯಮದ ಭಿನ್ನ ಆಲೋಚನೆಗಳಿಗೆ ರಾಜ್ಯಮಟ್ಟದಲ್ಲಿಯೇ ಸೂಕ್ತ ಬೆಂಬಲ ಸಿಗುವಂತೆ ಮಾಡುವುದು ಇದರ ಉದ್ದೇಶ.