ಬೆಂಗಳೂರು: ಇಂಗ್ಲೆಂಡ್‌ನಲ್ಲಿ ಆರಂಭವಾಗುವ 12ನೇ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗೆ ಇಂದು ಸಂಜೆ ಚಾಲನೆ ಸಿಗಲಿದ್ದು, ಆಯೋಜಕರು ಜಾಹೀರಾತುಗಳಿಂದ ಕೋಟಿ- ಕೋಟಿ ದುಡ್ಡು ಬಾಚಿಕೊಳ್ಳುವ ಸ್ಟ್ರಾಟೆಜಿ ರೂಪಿಸಿಕೊಂಡಿದ್ದಾರೆ.
ವಿಶ್ವದಲ್ಲೇ ಅತಿ ಹೆಚ್ಚು ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವ ಭಾರತದಲ್ಲಿನ ಪಂದ್ಯಾವಳಿಗಳ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಸಂಸ್ಥೆ ಪಡೆದುಕೊಂಡಿದೆ. ಮೇ 30ರಿಂದ ಜುಲೈ 14ರ ವರೆಗೆ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಗಳಿಂದ ಸಾವಿರಾರು ಕೋಟಿ ರೂ. ಕೊಯ್ಲು ತೆಗೆಯುವ ಲೆಕ್ಕಾಚಾರವನ್ನು ಸ್ಟಾರ್ ಗ್ರೂಪ್ ಹಾಕಿಕೊಂಡಿದೆ.
ಪ್ರಸ್ತುತ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಗಳ ಮಧ್ಯದಲ್ಲಿ ಪ್ರಸಾರವಾಗುವ ಜಾಹೀರಾತುಗಳಿಂದ ಸ್ಟಾರ್ ಇಂಡಿಯಾ ಕಂಪನಿಯು ₹ 1,800 ಕೋಟಿಗೂ ಅಧಿಕ ಆದಾಯ ಸಂಗ್ರಹಿಸುವ ಗುರಿ ಇರಿಸಿಕೊಂಡಿದೆ ಎಂದು ಕಂಪನಿಯ ಮುಖ್ಯಸ್ಥರು ಹೇಳಿದ್ದಾರೆ.
ಟಿವಿ ವೀಕ್ಷಕರಂತೆ ಮೊಬೈಲ್ ವೀಕ್ಷಕರ ಸಂಖ್ಯೆಯೂ ಅಧಿಕವಾಗುತ್ತಿದ್ದು, ಹಾಟ್ಸ್ಟಾರ್ ಆ್ಯಪ್ನ ಡಿಜಿಟಲ್ ಪ್ರಸಾರದಡಿ ₹ 250- 300 ಕೋಟಿಯಷ್ಟು ಲಾಭಾಂಶ ನಿರೀಕ್ಷಿಸುತ್ತಿದ್ದೇವೆ ಎಂದರು.
ಭಾರತದಲ್ಲಿನ ಕ್ರಿಕೆಟ್ ಪ್ರಸಾರದಿಂದ ₹ 500 ಕೋಟಿ, ವಿದೇಶಗಳ ಮಾರಾಟ ಮತ್ತು ಪಾವತಿ ಆದಾಯದ ಮೇಲೆ ₹ 500 ಕೋಟಿ ಹಾಗೂ ಸಾಗರೋತ್ತರ ಮಾರುಕಟ್ಟೆಯಿಂದ ₹ 200 ಕೋಟಿ ಗಳಿಸಲಿದ್ದೇವೆ. ಭಾರತ ಸೇರಿದಂತೆ ಒಟ್ಟಾರೆ ₹ 3,000 ಕೋಟಿಯಷ್ಟು ಆದಾಯ ಎದುರು ನೋಡುತ್ತಿದ್ದೇವೆ ಎಂದು ವಿವರಿಸಿದ್ದಾರೆ.
ಐಸಿಸಿನಿಂದ ಆಡಿಯೋ-ದೃಶ್ಯ ಪ್ರಸಾರದ ವಿತರಣೆ ಹಕ್ಕನ್ನು ಸ್ಟಾರ್ ಇಂಡಿಯಾ ಮತ್ತು ಸ್ಟಾರ್ ಮಿಡ್ಲ್ ಈಸ್ಟ್ 2015-2023 ರವರೆಗೆ 8 ವರ್ಷಕ್ಕೆ ಗುತ್ತಿಗೆ ಪಡೆದುಕೊಂಡಿದೆ. ಇದಕ್ಕಾಗಿ ₹ 12 ಸಾವಿರ ಕೋಟಿ ನೀಡಿವೆ.
2007-2015ರ ಅವಧಿಯ ಹಕ್ಕುಗಳನ್ನು ಇಎಸ್ಪಿಎನ್ ಸ್ಟಾರ್ ಸ್ಪೋರ್ಟ್ಸ್ ಪಡೆದುಕೊಂಡಿತ್ತು.