ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ತನಿಖೆಯಲ್ಲಿ ಮಹಾರಾಷ್ಟ್ರವನ್ನು ಕೆಣಕುವ ಪಿತೂರಿ ನಡೆಯುತ್ತಿದೆ. ಇದೀಗ ಸಿಬಿಐ ತನಿಖೆ ಮತ್ತು ಏಮ್ಸ್ ಫೋರೆನ್ಸಿಕ್ ವರದಿಯನ್ನು ಸಹ ಪ್ರಶ್ನಿಸಿರುವುದು ವಿಚಿತ್ರ ಎಂದು ಶಿವಸೇನೆ ವಕ್ತಾರ ಸಂಜಯ್ ರಾವತ್ ಕಿಡಿಕಾರಿದ್ದಾರೆ.
'ಇದು ಬಹಳ ಆಶ್ಚರ್ಯಕರ ಸಂಗತಿಯಾಗಿದೆ. ಈ ಹಿಂದೆ ಅವರಿಗೆ(ಸುಶಾಂತ್ ಅವರ ಕುಟುಂಬ ಮತ್ತು ಬೆಂಬಲಿಗರು) ಮುಂಬೈ ಪೊಲೀಸ್ ತನಿಖೆ ಮತ್ತು ಡಾ. ಆರ್ ಎನ್ ಕೂಪರ್ ಆಸ್ಪತ್ರೆ ನೀಡಿದ ಶವಪರೀಕ್ಷೆಯ ವರದಿಯಲ್ಲಿ ನಂಬಿಕೆ ಇರಲಿಲ್ಲ. ಇದೀಗ ಸಿಬಿಐ ತನಿಖೆ ಮತ್ತು ಏಮ್ಸ್ ಫೋರೆನ್ಸಿಕ್ ವರದಿಯನ್ನು ಸಹ ಪ್ರಶ್ನಿಸಿರುವುದು ವಿಚಿತ್ರ' ಎಂದು ರಾವತ್ ಹೇಳಿದರು.
ಡಾ. ಸುಧೀರ್ ಗುಪ್ತಾ ನೇತೃತ್ವದ ವಿಧಿವಿಜ್ಞಾನ ವೈದ್ಯಕೀಯ ಮಂಡಳಿಯ ತನಿಖೆಯ ಪ್ರಕಾರ ಬಾಲಿವುಡ್ ನಟ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಿರುವ ಏಮ್ಸ್ ವರದಿಯ ಮೇಲೆ ಶಂಕಿಸಲಾಗಿತ್ತು. ಇದೀಗ ಸಿಬಿಐ ಕೂಡ ಸುಶಾಂತ್ ಸಾವು ಕೊಲೆ ಅಲ್ಲ ಆತ್ಮಹತ್ಯೆ ಎಂದು ವರದಿ ನೀಡಿದೆ. ಇದು ಮುಂಬೈ ಪೊಲೀಸ್ ನಿರ್ವಹಿಸಿದ ತನಿಖೆಗೆ ಅನುಗುಣವಾಗಿದೆ ಎಂದು ರಾವತ್ ಹೇಳಿದ್ದಾರೆ.
'ಈಗ ಸಿಬಿಐ ತನಿಖೆ ಅನುಮಾನಿಸಲಾಗುತ್ತಿದೆ ಮತ್ತು ಏಮ್ಸ್ ವರದಿಯನ್ನು ಪ್ರಶ್ನಿಸಲಾಗುತ್ತಿದೆ' ಎಂದ ಶಿವಸೇನಾ ವಕ್ತಾರ, ಬೇಕಾದ್ರೆ ಕೆಜಿಬಿ ಅಥವಾ ಮೊಸಾದ್ ನಂತಹ ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳಿಂದಲೂ ಈ ವಿಷಯವನ್ನು ತನಿಖೆ ಮಾಡಬಹುದು ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.