ನವದೆಹಲಿ: ಇರಾನ್‌ನಿಂದ ಮರಳಿರುವ 142 ಭಾರತೀಯರನ್ನು ದೆಹಲಿಯಿಂದ ಜೋಧ್‌ಪುರಕ್ಕೆ ಕರೆದೊಯ್ಯಲು ಭಾನುವಾರ ವಿಶೇಷ ವಿಮಾನ ಹಾರಾಟ ನಡೆಸಲಿದ್ದೇವೆ ಎಂದು ಸ್ಪೈಸ್‌ಜೆಟ್ ಗುರುವಾರ ತಿಳಿಸಿದೆ.
ಈ ವಿಶೇಷ ಹಾರಾಟವನ್ನು ಭಾರತ ಸರ್ಕಾರದ ಅನುಮತಿ ಮುಖಾಂತರ ಹಾರಾಟ ನಡೆಸಲಾಗುವುದು. ಈ ಹಾರಾಟಕ್ಕೆ ಬೋಯಿಂಗ್ 737 ವಿಮಾನವನ್ನು ನಿಯೋಜನೆ ಮಾಡಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸ್ಪೈಸ್‌ಜೆಟ್ ತಿಳಿಸಿದೆ.
ಕೊರೊನಾ ಸೋಂಕು ಪರಿಣಾಮ ಅಂತಾರಾಷ್ಟೀಯ ವಿಮಾನಯಾನವನ್ನು ಸರ್ಕಾರ ರದ್ದು ಮಾಡಿತ್ತು. ಈ ಹಿನ್ನೆಲೆ ಪ್ರಯಾಣಿಕರನ್ನು ಹೊತ್ತೊಯ್ಯುವ 82 ಬೋಯಿಂಗ್ 737, ಎರಡು ಏರ್ಬಸ್ ಎ 320 ಮತ್ತು 32 ಬೊಂಬಾರ್ಡಿಯರ್ ಕ್ಯೂ-400 ವಿಮಾನಗಳ ಹಾರಾಟ ನಿಲ್ಲಿಸಿವೆ. ಆದರೆ, ಸರಕು ಸಾಗಣೆ ವಿಮಾನಯಾಕ್ಕೆ ನಿಷೇಧ ಇಲ್ಲವಾದ್ದರಿಂದ ವಿಮಾನಯಾನ ಸಂಸ್ಥೆಯ ಐದು ಬಿ737 ವಿಮಾನಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.
ಭಾನುವಾರದ ವಿಶೇಷ ಹಾರಾಟಕ್ಕೆ ಬಳಸಲಾಗುವ ವಿಮಾನ ಮರಳಿ ದೆಹಲಿಗೆ ಬಂದಾಗ ಸಂಪೂರ್ಣವಾಗಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸ್ವಚ್ಛಗೊಳಿಸಲಾಗುವುದು ಎಂದು ಕಂಪನಿ ಹೇಳಿದೆ.
ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಸುಕಿನಜಾವ 1.40 ಕ್ಕೆ ವಿಮಾನ ಹಾರಾಟ ನಡೆಸಿ ಮಾರ್ಚ್ 29 ರಂದು ಸನುಕಿನಜಾವ 2.55 ಕ್ಕೆ ಜೋಧಪುರ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ.