ಮುಂಬೈ( ಮಹಾರಾಷ್ಟ್ರ): ಭಾರಿ ವರ್ಷಧಾರೆಯಿಂದಾಗಿ ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಅವಾಂತರ ಸೃಷ್ಟಿಯಾಗಿದ್ದು, ದಾದರ್ ಹಾಗೂ ಪ್ರಭಾದೇವಿ ಪ್ರದೇಶಗಳಿಗೆ ನೀರು ನುಗ್ಗಿದೆ.
ವಿಹಾರ್ - ಅಂಧೇರಿ - ಬಾಂದ್ರಾ ನಡುವೆ ಓಡಾಡುತ್ತಿದ್ದ ವಿಶೇಷ ಉಪನಗರ ರೈಲು ಸೇವೆ ಹಾಗೂ ಬಾಂದ್ರಾ ಹಾಗೂ ಚರ್ಚ್ಗೇಟ್ ಬಳಿಯ ಸಾಮಾನ್ಯ ರೈಲು ಸೇವೆಗಳನ್ನು ರದ್ದು ಮಾಡಲಾಗಿದೆ ಎಂದು ಪಶ್ಚಿಮ ರೈಲ್ವೆ ಮಾಹಿತಿ ನೀಡಿದೆ.
ಹವಾಮಾನ ಇಲಾಖೆ ಈ ಹಿಂದೆ ಆಗಸ್ಟ್ 5ರಂದು ಧಾರಾಕಾರ ಮಳೆಯಾಗುವ ಮುನ್ಸೂಚನೆ ನೀಡಿತ್ತು. ಇದರಿಂದಾಗಿ ನಗರದೆಲ್ಲೆಡೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ಕಳೆದ ರಾತ್ರಿಯಿಂದ ಬೀಳುತ್ತಿರುವ ಮಳೆಯು ಅಕ್ಷರಶಃ ಮುಂಬೈಯನ್ನು ಅವಾಂತರದಲ್ಲಿ ಸಿಲುಕಿಸಿದೆ.
ಮುಂಬೈಯಲ್ಲಿ ಸಾರ್ವಜನಿಕ ಜೀವನ ಅಸ್ತವ್ಯಸ್ತವಾಗಿದ್ದು, ಮುಂದಿನ 48 ಗಂಟೆಗಳಲ್ಲಿ ಮುಂಬೈ ಮತ್ತು ಥಾಣೆಗಳಲ್ಲಿ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮಳೆಯಿಂದಾಗಿ, ಮುಂಬೈನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ರೈಲ್ವೆ ಹಳಿಗಳಲ್ಲಿ ನೀರು ಹರಿಯುವುದರಿಂದ ಪಶ್ಚಿಮ ಮತ್ತು ಬಂದರು ರೈಲ್ವೆ ಸಂಚಾರ ಅಸ್ತವ್ಯಸ್ಥವಾಗಿದೆ. ಕೊಲಾಬಾ ಮಳೆ ಮಾಪನ ಕೇಂದ್ರದಲ್ಲಿ ಬೆಳಗ್ಗೆ 8 ಗಂಟೆಯವರೆಗೆ 220 ಮಿ.ಮೀ ಮತ್ತು ಸಾಂತಾಕ್ರೂಜ್ ಮಳೆ ಮಾಪನ ಕೇಂದ್ರದಲ್ಲಿ 254 ಮಿ.ಮೀ ಮಳೆಯಾಗಿದೆ.
ಮುಂಬೈ ನಗರಸಭೆ ತೀವ್ರ ಮುನ್ನೆಚ್ಚರಿಕೆ ಘೋಷಣೆ ಮಾಡಿದ್ದು,ಅನಿವಾರ್ಯತೆ ಇಲ್ಲದೇ ಮನೆಗಳನ್ನು ಇಟ್ಟು ಹೋಗದಂತೆ ನಾಗರಿಕರಿಗೆ ಮನವಿ ಮಾಡಿದೆ. ಮೀನುಗಾರರೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.