ಜಗತ್ತಿನಾದ್ಯಂತ ಹತ್ತಿರ ಹತ್ತಿರ 18 ಲಕ್ಷ ಪ್ರಕರಣಗಳು ಮತ್ತು 1,09,000 ಸಾವುಗಳ ಮೂಲಕ ಭಯಾನಕ ಪರಿಸ್ಥಿತಿಯನ್ನು ನಿರ್ಮಿಸಿದ್ದು, ಭಾರತದಲ್ಲಿ ಸಹ ಸಾರ್ವಜನಿಕರ ಆರೋಗ್ಯದ ಮೇಲೆ ದೊಡ್ಡ ಸವಾಲನ್ನೇ ಒಡ್ಡುತ್ತಿದೆ. ಇಡೀ ದೇಶ 21 ದಿನಗಳ ಸ್ವಯಂ ದಿಗ್ಬಂಧನಕ್ಕೆ ಒಳಪಟ್ಟಿರುವ ಕೊನೆಯ ವಾರ ಇದಾಗಿದ್ದು, ನಮ್ಮ ದೇಶದಲ್ಲಿ ಕೊರೊನಾ ಎಷ್ಟು ವ್ಯಾಪಿಸಿದೆ ಎಂಬುದರ ಚಿತ್ರಣ ಏಪ್ರಿಲ್ 16ರ ಹೊತ್ತಿಗೆ ಸ್ಪಷ್ಟವಾಗಲಿದೆ.
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮೊದಲ 500 ತಲುಪಲು 55 ದಿನಗಳು ಬೇಕಾದವು. ಆದರೆ, ಪ್ರಕರಣಗಳ ಸಂಖ್ಯೆ 3500 ಗಡಿ ತಲುಪಿದಾಗ, ಒಂದೇ ದಿನದಲ್ಲಿ 500ರಷ್ಟು ಸೋಂಕಿತರು ಸೇರ್ಪಡೆಯಾಗುವ ಹಂತ ಬಂದಿದ್ದು, ಪರಿಸ್ಥಿತಿ ಅಪಾಯಕಾರಿಯಾಗಿ ಬದಲಾಗುತ್ತಿದೆ ಎಂಬುದಕ್ಕೆ ನಿದರ್ಶನ. ಸೋಂಕಿನ ಲಕ್ಷಣಗಳಿರುವ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದಾಗ ಮಾತ್ರ ಕೊರೊನಾ ಹರಡಿರುವ ವ್ಯಾಪ್ತಿಯ ನಿಖರ ವಾಸ್ತವ ಸ್ಪಷ್ಟವಾಗುತ್ತದೆ ಎಂಬ ತಜ್ಞರ ಅಭಿಪ್ರಾಯವನ್ನು ತಳ್ಳಿಹಾಕುವಂತಿಲ್ಲ. ಆದರೆ, ಪರೀಕ್ಷಾ ಕಿಟ್‌ಗಳ ಸೀಮಿತ ಲಭ್ಯತೆಯಿಂದಾಗಿ, ವಿದೇಶದಿಂದ ಹಿಂದಿರುಗಿರುವ ಹಾಗೂ ರೋಗ ಲಕ್ಷಣಗಳು ದೃಢಪಟ್ಟಿರುವವರಿಗೆ ಮಾತ್ರ ಸರ್ಕಾರ ಮೊದಲ ಆದ್ಯತೆ ಕೊಟ್ಟಿದೆ.
ಕೊರೊನಾ ರೋಗ ನಾಲ್ಕು ಹಂತಗಳಲ್ಲಿ ಹರಡುತ್ತದೆ ಎಂಬ ತಿಳಿವಳಿಕೆಯ ಹಿನ್ನೆಲೆಯಲ್ಲಿ, ವಿದೇಶದಿಂದ ಹಿಂದಿರುಗಿದವರು ಹಾಗೂ ಅವರ ನಿಕಟವರ್ತಿಗಳನ್ನು ಕ್ವಾರಂಟೈನ್‌ನಲ್ಲಿ ಇರಿಸಿ ಅವಶ್ಯಕ ಪರೀಕ್ಷಾ ಪ್ರಯೋಗಗಳನ್ನು ಕೈಗೊಳ್ಳಲಾಯಿತು. ಕೊರೊನಾ ವೈರಸ್ ಕೊಂಡಿಯನ್ನು ತುಂಡರಿಸಲು ಮೂರು ವಾರಗಳ ಅವಧಿ ಸಾಕಾಗುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾರ್ಚ್ 24ರಂದು ದೇಶವ್ಯಾಪಿ ದಿಗ್ಬಂಧನವನ್ನು ಘೋಷಿಸಿತು. ಈ ನಡುವೆ, ವೈರಸ್ ವಿರುದ್ಧ ಹೋರಾಡಲು ಮತ್ತು ಅವಶ್ಯಕ ವೈದ್ಯಕೀಯ ಮೂಲಸೌಕರ್ಯಗಳನ್ನು ಒಗ್ಗೂಡಿಸಿಕೊಳ್ಳಲು ಬೇಕಾದ ಅವಶ್ಯಕ ಸಿದ್ಧತೆಗಳನ್ನು ಕೈಗೊಳ್ಳುವುದಕ್ಕೆ ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ಸಮಯಾವಕಾಶ ಸಿಗುವಂತೆ ನೋಡಿಕೊಳ್ಳಲಾಯಿತು.
ಆದರೆ, ಇಷ್ಟೆಲ್ಲ ಸಿದ್ಧತೆಗಳ ನಂತರವೂ ಕೊರೊನಾ ಸೋಂಕು ಸಾಂಕ್ರಾಮಿಕದಂತೆ ಹಬ್ಬಲು ಪ್ರಾರಂಭವಾಗಿದೆ ಎಂಬ ಗಂಭೀರ ಅನುಮಾನಗಳು ಮೂಡಲಾರಂಭಿಸಿವೆ. ಏಕೆಂದರೆ, ಕರ್ನಾಟಕದಲ್ಲಿ 22 [ಪ್ರಕರಣಗಳು ಹಾಗೂ ಮಹಾರಾಷ್ಟ್ರದಲ್ಲಿ ಶೇಕಡಾ 11ರಷ್ಟು ಪ್ರಕರಣಗಳು ಪತ್ತೆಯಾಗಿದ್ದು, ಇವರು ವಿದೇಶದಿಂದ ಹಿಂದಿರುಗಿದ ಅಥವಾ ಅವರಿಗೆ ಸಂಬಂಧಿಸಿದ ವ್ಯಕ್ತಿಗಳಾಗಿಲ್ಲ. ಆದ್ದರಿಂದ, ರೋಗ ಲಕ್ಷಣಗಳನ್ನು ಹೊಂದಿರುವ ಎಲ್ಲಾ ವ್ಯಕ್ತಿಗಳನ್ನು ವ್ಯಾಪಕವಾಗಿ ಪರೀಕ್ಷೆ ಒಳಪಡಿಸಬೇಕು ಹಾಗೂ ಸೋಂಕು ತಗಲಿದ ವ್ಯಕ್ತಿಗಳಿಗೆ ತಕ್ಷಣ ಚಿಕಿತ್ಸೆ ನೀಡಬೇಕಿದೆ.
ಕೆಮ್ಮು, ಜ್ವರ, ಋತುಮಾನ ಸಂಬಂಧಿ ಅಲರ್ಜಿ ಸಮಸ್ಯೆಗಳು ಜಗತ್ತಿನಾದ್ಯಂತ ಅತಿ ಸಾಮಾನ್ಯ. ಹಲವಾರು ಅಧ್ಯಯನಗಳು ಸೂಚಿಸಿದಂತೆ, ಪ್ರಾರಂಭದ ಹಂತದಲ್ಲಿ ಕೊರೊನಾ ಸಹ ಇವೇ ಲಕ್ಷಣಗಳನ್ನು ಹೊಂದಿರುತ್ತದಾದರೂ, ಅಪೌಷ್ಠಿಕತೆ ಹೊಂದಿರುವವರು, ವಯಸ್ಸಾದವರು ಹಾಗೂ ಮಧುಮೇಹ, ಅಧಿಕ ರಕ್ತದೊತ್ತಡದಂತಹ ಗಂಭೀರ ಕಾಯಿಲೆಗಳಿಂದ ನರಳುತ್ತಿರುವವರ ಮೇಲೆ ಅದು ಮಾರಣಾಂತಿಕ ದಾಳಿ ನಡೆಸುತ್ತದೆ. 1918 ರ ಕಾಲದ ಸ್ಪ್ಯಾನಿಶ್ ಫ್ಲುನಂತೆ ಹರಡುವ ಕೊರೊನಾ ಕುರಿತು ಹದಿಹರಯದವರು ಕೂಡಾ ಜಾಗೃತರಾಗಿರುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. “ಎಲ್ಲಾ ದೇಶಗಳಿಗೆ ನಮ್ಮ ಸಂದೇಶ ಇದೇ. ಎಲ್ಲಾ ಶಂಕಿತ ವ್ಯಕ್ತಿಗಳ ಪರೀಕ್ಷೆ ಮಾಡಿ”ಎಂದು ಮಾರ್ಚ್‌ನಲ್ಲಿಯೇ ಅದು ಎಚ್ಚರಿಕೆ ನೀಡಿತ್ತು.
ಆದರೆ, ಸದರಿ ಆರೋಗ್ಯ ಸಂಸ್ಥೆ ಎಚ್ಚರಿಕೆಗಳನ್ನು ಹೊರಡಿಸುವ ಹೊತ್ತಿಗಾಗಲೇ, 2003 ರ ಸಾರ್ಸ್ ಅನುಭವ ಕಲಿಸಿದ ಪಾಠಗಳ ಹಿನ್ನೆಲೆಯಲ್ಲಿ ಚೀನಾ ದೇಶ 3 ಲಕ್ಷ 20 ಸಾವಿರ ಜನರ ಪರೀಕ್ಷೆಯನ್ನು ಕಳೆದ ತಿಂಗಳ ಅಂತ್ಯದ ವೇಳೆಗಾಗಲೇ ನಡೆಸಿಯಾಗಿತ್ತು. ಸಾರ್ಸ್ ರೋಗವನ್ನು ಪತ್ತೆ ಹಚ್ಚಿದ್ದ ಹಾಂಗ್‌ಕಾಂಗ್ ತಂಡದ ನೆರವಿನಿಂದ, ಅತ್ಯಾಧುನಿಕ ರೋಗಪರೀಕ್ಷಾ ಕಿಟ್‌ಗಳನ್ನು ಅಭಿವೃದ್ಧಿಪಡಿಸಿದ ಅದು, ಸಮರೋಪಾದಿಯಲ್ಲಿ ಎಲ್ಲರಿಗೂ ಅವು ಲಭ್ಯವಾಗುವಂತೆ ನೋಡಿಕೊಂಡಿತ್ತು. ಕೊರೊನಾದ ವಿನಾಶಕಾರಿ ಶಕ್ತಿಯನ್ನು ಅದಾಗಲೇ ಗ್ರಹಿಸಿದ್ದ, ಬರ್ಲಿನ್ ವಿಜ್ಞಾನಿ ಆಲ್ಬರ್ಟ್ ಲಾನ್, ಈ ರೋಗ ಸಾರ್ಸ್ ರೀತಿಯ ಸಾಮ್ಯತೆಗಳನ್ನು ಹೊಂದಿದೆ ಎಂದು ಎಚ್ಚರಿಸಿದ್ದ. ಈ ಹಿನ್ನೆಲೆಯಲ್ಲಿ ಫೆಬ್ರವರಿ ಅಂತ್ಯದ ಹೊತ್ತಿಗಾಗಲೇ ಜರ್ಮನಿ ಬುದ್ಧಿವಂತಿಕೆಯಿಂದ 400 ಲಕ್ಷ ಪರೀಕ್ಷಾ ಕಿಟ್‌ಗಳನ್ನು ಅಭಿವೃದ್ಧಿಪಡಿಸಿತ್ತು. ವಾರಕ್ಕೆ 15 ಲಕ್ಷ ಕಿಟ್‌ಗಳನ್ನು ತಯಾರಿಸುವ ಸಾಮರ್ಥ್ಯದೊಂದಿಗೆ, ಅದು ಪ್ರತಿ ದಿನ 30 ಸಾವಿರ ಪರೀಕ್ಷೆಗಳನ್ನು ನಡೆಸುತ್ತ ಕೊರೊನಾ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತಿದೆ.
ಇತರ ದೇಶಗಳಿಗೆ ಹೋಲಿಸಿದರೆ ಕೊರೊನಾ ವೈರಸ್ನನ್ನು ಮೊದಲ ಹಂತದಲ್ಲಿಯೇ ಪತ್ತೆ ಹಚ್ಚಿ, ಅವಶ್ಯಕ ಚಿಕಿತ್ಸೆಯನ್ನು ನೀಡುವುದರೊಂದಿಗೆ ಜರ್ಮನಿ ಹೆಚ್ಚು ಆತ್ಮವಿಶ್ವಾಸದಿಂದ ಮುಂದೆ ಸಾಗುತ್ತಿದೆ. ಫ್ರಾನ್ಸ್‌ನಲ್ಲಿ,82,000ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸಾವಿನ ಸಂಖ್ಯೆ ಆರೂವರೆ ಸಾವಿರ ಮೀರಿದೆ. ಸಾವಿನ ಪ್ರಮಾಣವನ್ನು 1,275ಕ್ಕೆ ಸೀಮಿತಗೊಳಿಸುವಲ್ಲಿ ಹಾಗೂ 91 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಗುರುತಿಸುವಲ್ಲಿ ಜರ್ಮನಿಯ ಯಶಸ್ಸಿನ ರಹಸ್ಯ ಅಡಗಿದೆ. ದಕ್ಷಿಣ ಕೊರಿಯಾ ಕೂಡಾ ಇದೇ ತಂತ್ರಗಾರಿಕೆಯನ್ನು ಅನುಸರಿಸಿದೆ. ಎಲ್ಲಾ ಶಂಕಿತರನ್ನು ಕ್ಷಿಪ್ರವಾಗಿ ಪರೀಕ್ಷೆಗೆ ಒಳಪಡಿಸುವ ಮೂಲಕ ಜೀವಗಳನ್ನು ಉಳಿಸುವುದು ಹಾಗೂ ನಂತರ ಉಳಿದ ಬಾಧಿತರ ಜೀವ ಕಾಪಾಡುವ ಈ ಎರಡು ಕವಲಿನ ತಂತ್ರಗಾರಿಕೆ ಭಾರತಕ್ಕೆ ತುಂಬಾ ಉಪಯುಕ್ತವಾಗಬಲ್ಲುದು.
ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರೀಸರ್ಚ್– ಐಸಿಎಂಆರ್) ಪ್ರಕಾರ, ಕೊರೊನಾ ಅಂಧಕಾರದ ವಿರುದ್ಧ ಹೋರಾಡಲು ಪ್ರಧಾನಮಂತ್ರಿಗಳು ಏಪ್ರಿಲ್ 5ರಂದು ದೇಶವ್ಯಾಪಿ ದೀಪಾಂದೋಲನಕ್ಕೆ ಕರೆ ಕೊಡುವ ಹೊತ್ತಿಗೆ ಒಟ್ಟು 89,534 ಪರೀಕ್ಷೆಗಳನ್ನು ನಡೆಸಲಾಗಿತ್ತು! ಕೊರೊನಾ ದಾಳಿಯನ್ನು ಲಘುವಾಗಿ ಪರಿಗಣಿಸಿದ ಅಮೆರಿಕ, “ಇದು ಋತುಮಾನದ ನೆಗಡಿ ಮತ್ತು ಫ್ಲು ಅಲ್ಲದೇ ಮತ್ತೇನೂ ಅಲ್ಲ” ಎಂದು ಉಡಾಫೆಯಿಂದ ತಳ್ಳಿಹಾಕಿತ್ತು. ಈಗ ಸಾವಿನ ಸಂಖ್ಯೆಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿರುವ ಅದು ದಿನಕ್ಕೆ ಒಂದು ಲಕ್ಷ ಪರೀಕ್ಷೆಗಳನ್ನು ನಡೆಸುತ್ತಿದೆ. ಬಲವಾದ ತಂತ್ರಗಾರಿಕೆಯನ್ನು ರೂಪಿಸುವಲ್ಲಿ ನಿರ್ಲಕ್ಷ್ಯ ತೋರಬಾರದು ಎಂಬುದಕ್ಕೆ ಇದು ನಮ್ಮೆಲ್ಲರಿಗೂ ಮುನ್ನೆಚ್ಚರಿಕೆಯಾಗಬೇಕು.
ಭಾರತದಲ್ಲಿ ಕೋವಿಡ್ ಕೆಂಪು ವಲಯಗಳನ್ನು ಈಗಾಗಲೇ ಗುರುತಿಸಿರುವ ಸರ್ಕಾರ, ದಿಗ್ಬಂಧನವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಜೊತೆಗೆ ವ್ಯಾಪಕವಾಗಿ ಪರೀಕ್ಷೆಗಳನ್ನು ನಡೆಸುವ ಮೂಲಕ ರೋಗ ಪ್ರಸರಣವಾಗದಂತೆ ನಿರ್ಬಂಧಿಸಲು ಉದ್ದೇಶಿಸಿದೆ. ಪ್ರತಿ ಮೂರು ದಿನಗಳಿಗೊಮ್ಮೆ ಕೊರೊನಾ ಪರೀಕ್ಷೆಗಳನ್ನು ದುಪ್ಪಟ್ಟು ಮಾಡಲಾಗುತ್ತಿದ್ದು, ಕೊರೊನಾ ಶಂಕಿತರ ಪತ್ತೆಗಾಗಿ ಕ್ಷಯರೋಗ ಪತ್ತೆ ಪರೀಕ್ಷಾ ಸಲಕರಣೆಗಳನ್ನು ಬಳಸಲಾಗುವುದು ಎಂದಿರುವ ಐಸಿಎಂಆರ್, ಹದಿನೈದು ನಿಮಿಷಗಳೊಳಗಾಗಿ ಫಲಿತಾಂಶ ಆಧರಿತ ಪ್ರತಿರೋಧ ಪರೀಕ್ಷೆಯನ್ನು ವ್ಯಾಪಕವಾಗಿ ನಡೆಸಲಾಗುವುದು ಎಂದು ಹೇಳಿದೆ.
ಕೊರೊನಾ ಪರೀಕ್ಷೆಗಾಗಿ ಸರ್ಕಾರ ರೂ.4,500 ಶುಲ್ಕವನ್ನು ನಿಗದಿ ಮಾಡಿದ್ದು, ಕೆಲವು ಖಾಸಗಿ ಸಂಸ್ಥೆಗಳಿಗೂ ಈ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡಿದೆ. ಭವಿಷ್ಯದ ಅವಶ್ಯಕತೆಗಳ ಒತ್ತಡವನ್ನು ಸಹಿಸಲು ಇವು ಸಾಕಾಗಲಿಕ್ಕಿಲ್ಲ. ಆದ್ದರಿಂದ, ಪ್ರತಿಷ್ಠಿತ ಖಾಸಗಿ ಪರೀಕ್ಷಾ ಪ್ರಯೋಗಾಲಯಗಳನ್ನು ಉತ್ತೇಜಿಸುವ ಮೂಲಕ ಈ ಪರೀಕ್ಷಾ ಸೌಲಭ್ಯಗಳನ್ನು ತಾಲೂಕು ಮಟ್ಟಕ್ಕೆ ವಿಸ್ತರಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಮುಂದಿನ ತಿಂಗಳಿನ ಒಂಬತ್ತನೇ ತಾರೀಕಿನ ಹೊತ್ತಿಗೆ ಕೊರೊನಾ ರೇಖೆ ಚಪ್ಪಟೆಯಾಗಲಿದೆ ಎಂಬ ಆಶಾವಾದವಿದೆ. ಆದರೆ, ಅಷ್ಟರೊಳಗೆ, ಒಂದು ವೇಳೆ ಅಂತಹ ಅಗೋಚರ ಸವಾಲುಗಳೇನಾದರೂ ಬಂದಲ್ಲಿ, ಪರೀಕ್ಷೆ ಮತ್ತು ಚಿಕಿತ್ಸೆಗೆ ಬೇಕಾದ ಯಂತ್ರಗಳನ್ನು ಸಿದ್ಧಪಡಿಸಿಕೊಳ್ಳುವ ಅವಶ್ಯಕತೆಯಿದೆ.