ಮೊರಾದಾಬಾದ್: ಆಸ್ಪತ್ರೆ ಆವರಣಗಳಲ್ಲಿ ಧೂಮಪಾನ ಮಾಡುವುದು ನಿಷೇಧ. ಈ ಸ್ಥಳಗಳಲ್ಲಿ ಸಿಗರೇಟು ಸೇದ ಬಾರದೆಂದು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕೆಲವೊಂದು ಬೋರ್ಡ್ ಸಹ ಹಾಕಲಾಗಿರುತ್ತದೆ. ಆದರೆ ಸಮಾಜವಾದಿ ಪಕ್ಷದ ಮುಖಂಡನೋರ್ವ ಜಿಲ್ಲಾಸ್ಪತ್ರೆ ಆವರಣದಲ್ಲೇ ಸಿಗರೇಟ್ ಸೇದಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಉತ್ತರಪ್ರದೇಶದ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಜನ್ಮದಿನದ ಅಂಗವಾಗಿ ಎಸ್ಪಿ ಶಾಸಕ ಹಾಜಿ ಇಕ್ರಂ ಖುರೇಷಿ ಜಿಲ್ಲಾಸ್ಪತ್ರೆ ರೋಗಿಗಳಿಗೆ ಹಣ್ಣು ವಿತರಿಸಲು ಆಗಮಿಸಿದ್ದಾರೆ. ಈ ವೇಳೆ ಜಿಲ್ಲಾಸ್ಪತ್ರೆ ಆವರಣದಲ್ಲಿ ನಿಂತು ಸಿಗರೇಟು ಸೇದಿರುವ ದೃಶ್ಯ ವೈರಲ್ ಆಗಿದ್ದು, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಶಾಸಕರು ಪ್ರತಿಕ್ರಿಯೆ ನೀಡಿದ್ದು, ಜಿಲ್ಲಾಸ್ಪತ್ರೆ ಆವರಣದಲ್ಲಿ ತಾವು ಸಿಗರೇಟು ಸೇದಿಲ್ಲ. ಕೆಲ ಕಿಡಿಗೇಡಿಗಳು ತಮ್ಮ ಹೆಸರು ಕೆಡಿಸುವ ಉದ್ದೇಶದಿಂದ ಈ ರೀತಿಯಾಗಿ ನಡೆದುಕೊಂಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.