ಸಿಕಂದರಾಬಾದ್: ಸೌತ್ ಸೆಂಟ್ರಲ್ ರೈಲ್ವೆ (ಎಸ್‌ಸಿಆರ್) ಲಾಕ್ಡೌನ್ ಆರಂಭದಿಂದ ಈವರೆಗೆ ಆಂಧ್ರ ಪ್ರದೇಶದ ರೆನಿಗುಂಟಾದಿಂದ ನವದೆಹಲಿಗೆ 3 ಕೋಟಿ ಲೀಟರ್ ಹಾಲನ್ನು "ದೂಧ್ ಡುರೊಂಟೊ ಸ್ಪೆಷಲ್" ರೈಲುಗಳ ಮೂಲಕ ರವಾನಿಸಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ರಾಷ್ಟ್ರ ರಾಜಧಾನಿಯ ಜನರಿಗೆ ಹಾಲು ಪೂರೈಸಲು ರೆನಿಗುಂಟಾದಿಂದ ಹಜರತ್ ನಿಜಾಮುದ್ದೀನ್ವರೆಗೆ ಲಾಕ್ಡೌನ್ ಅವಧಿಯಲ್ಲಿ ಪರಿಚಯಿಸಲಾದ ದೂಧ್ ಡುರೊಂಟೊ ಸ್ಪೆಷಲ್ ರೈಲು ಸೋಮವಾರ 3 ಕೋಟಿ ಲೀಟರ್ ಹಾಲು ಪೂರೈಸಿದೆ" ಎಂದು ಎಸ್‌ಸಿಆರ್ ವಕ್ತಾರ ಸಿ.ಹೆಚ್.ರಾಕೇಶ್ ಹೇಳಿದ್ದಾರೆ.
"ದೇಶಾದ್ಯಂತ ಹಾಲು ಸರಬರಾಜನ್ನು ಸಮತೋಲನಗೊಳಿಸುವಲ್ಲಿ ರೆನಿಗುಂಟಾದಿಂದ ನವದೆಹಲಿಗೆ ಹಾಲಿನ ಸಾಗಣೆ ಪ್ರಮುಖ ಪಾತ್ರ ವಹಿಸುತ್ತದೆ" ಎಂದು ಅವರು ಹೇಳಿದ್ದಾರೆ.
ಸಾಗಿಸಬೇಕಾದ ಹಾಲನ್ನು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ಘಟಕವು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ ಮತ್ತು ಸುತ್ತಮುತ್ತಲಿನ 13,000 ಹಳ್ಳಿಗಳಲ್ಲಿ, 3,000 ಕ್ಕೂ ಹೆಚ್ಚು ಪೂಲಿಂಗ್ ಪಾಯಿಂಟ್‌ಗಳಿಂದ ಹಾಲು ಪಡೆದಿದೆ ಎಂದು ರಾಕೇಶ್ ಹೇಳಿದ್ದಾರೆ.