ನವದೆಹಲಿ: ನೈತಿಕ ಮತದಾನದ ಬಗ್ಗೆ ಜನರಿಗೆ ಸಂದೇಶ ತಿಳಿಸಲು ಖ್ಯಾತ ಬಾಲಿವುಡ್ ನಟ ಸೋನು ಸೂದ್ ಅವರನ್ನು ಪಂಜಾಬ್ ರಾಜ್ಯದ ರಾಯಭಾರಿಯಾಗಿ ನೇಮಕ ಮಾಡಲು ಭಾರತ ಚುನಾವಣಾ ಆಯೋಗ (ಇಸಿಐ) ಒಪ್ಪಿಗೆ ನೀಡಿದೆ.
ಪಂಜಾಬ್‌ನ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಈ ನಿಟ್ಟಿನಲ್ಲಿ ಇಸಿಐಗೆ ಪ್ರಸ್ತಾವನೆ ಕಳುಹಿಸಿತ್ತು. ಇಸಿಐ ಕೂಡ ಅದಕ್ಕೆ ಅನುಮೋದನೆ ನೀಡಿದೆ. ಸಿಇಒ ಕಚೇರಿ ಈ ನೇಮಕಾತಿ ಜನರಿಗೆ ವಿಶೇಷವಾಗಿ ಯುವ ಮತದಾರರಿಗೆ ನೈತಿಕ ಮತದಾನದ ಬಗ್ಗೆ ತಿಳುವಳಿಕೆ ನೀಡಲು ಪ್ರಯೋಜನಕಾರಿ ಎಂದು ಹೇಳಿದೆ.
ಪಂಜಾಬ್‌ನ ಮೊಗಾ ಜಿಲ್ಲೆಗೆ ಸೇರಿದ ಸೋನು ಸೂದ್ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಪಂಜಾಬಿಯ ನಾನಾ ಚಿತ್ರಗಳಲ್ಲಿ ನಟಿಸಿದ್ದಾರೆ. ಸಾರ್ವಜನಿಕ ಕಲ್ಯಾಣ ಕಾರ್ಯಗಳು ಮತ್ತು ಇತರ ಸಾಮಾಜಿಕ ಸೇವೆಗಳಲ್ಲೂ ತೊಡಗಿಸಿಕೊಂಡಿದ್ದು, ಅಪಾರ ಜನಪ್ರಿಯತೆ ಗಳಿಸಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಸೋನ್ ಸೂದ್ ಅವರು ನಾನಾ ಸ್ಥಳಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗೆ ತಮ್ಮ ಮನೆಗಳಿಗೆ ತೆರಳಲು ಸಾರಿಗೆ ಸೌಲಭ್ಯಗಳನ್ನು ಒದಗಿಸಿದ್ದರು. ಸಮಾಜದ ಎಲ್ಲಾ ವರ್ಗದವರು ಅವರ ಕಾರ್ಯವನ್ನು ಮೆಚ್ಚಿದ್ದಾರೆ. ಸಾಮಾಜಿಕ ಸೇವೆಯ ನಿಸ್ವಾರ್ಥ, ಕರುಣಾಳು ಕೆಲಗಳಿಂದಾಗಿ ‘ನೈಜ’ ನಾಯಕನಾಗಿ ಹೊರಹೊಮ್ಮಿದರು.
2020ರ ಸೆಪ್ಟೆಂಬರ್ 30ರಂದು ಕೋವಿಡ್ -19ರ ಅಪಾಯಕಾರಿ ಕಾಲದಲ್ಲಿಯೂ ಜನರಿಗೆ ಸತತ ನೆರವಾಗಿದ್ದಕ್ಕಾಗಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮವು ಅವರಿಗೆ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿ ನೀಡಿ ಗೌರವಿಸಿತು.