ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯು ಸೋನಿಯಾ ಗಾಂಧಿಯವರ ಆರಂಭಿಕ ಹೇಳಿಕೆಯೊಂದಿಗೆ ಪ್ರಾರಂಭವಾಯಿತು. ಲಾಕ್ಡೌನ್ ನಿಂದಾಗಿ ರಾಷ್ಟ್ರವು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದೆ. ಇನ್ನೂ ಕಾಂಗ್ರೆಸ್ ನೀಡಿದ ಸಲಹೆಗಳನ್ನು ಸರ್ಕಾರ ಅರೆಬರೆಯಷ್ಟೇ ಜಾರಿಗೆ ತಂದಿದೆ ಎಂದು ಹೇಳಿದರು.
ಕೋವಿಡ್-19 ಪರೀಕ್ಷೆಗೆ, ಸಂಪರ್ಕತಡೆಗೆ ಯಾವುದೇ ಪರ್ಯಾಯ ಮಾರ್ಗವಿಲ್ಲ ಎಂಬುದು ಸರ್ಕಾರಕ್ಕೆ ತಿಳಿದಿರಲೇಬೇಕು. ಆದರೂ, ಪರೀಕ್ಷೆಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಪರೀಕ್ಷಾ ಕಿಟ್‌ಗಳು ಕಳಪೆ ಗುಣಮಟ್ಟದ್ದಾಗಿವೆ ಮತ್ತು ಅವುಗಳ ಪೂರೈಕೆಯೂ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಆರೋಪಿಸಿದರು.
ದೇಶದಲ್ಲಿನ ರೈತರು, ರೈತ ಕೂಲಿಗಳು, ವಲಸೆ ಕಾರ್ಮಿಕರು, ನಿರ್ಮಾಣ ಕಾರ್ಮಿಕರು ಹೊತ್ತಿನ ಊಟಕ್ಕೂ ಸಂಕಷ್ಟ ಅನುಭವಿಸುತ್ತಿದ್ದಾರೆ. ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕೆಗಳು ಸ್ಥಗಿತಗೊಂಡಿವೆ ಮತ್ತು 12 ಕೋಟಿಗೂ ಹೆಚ್ಚು ಉದ್ಯೋಗಾವಕಾಶಗಳು ನಾಶವಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಇನ್ನೂ ಕಾಂಗ್ರೆಸ್ ಒಂದಿಷ್ಟು ರಚನಾತ್ಮಕ ಸಹಕಾರ ಮತ್ತು ಸಲಹೆಗಳನ್ನು ನೀಡಿದೆ. ಆದರೆ, ದುರದೃಷ್ಟವಶಾತ್, ಸರ್ಕಾರವು ಅವುಗಳ ಮೇಲೆ ಗಮನ ಹರಿಸುತ್ತಿಲ್ಲ. ಇದರಲ್ಲೇ ಕೇಂದ್ರ ಸರ್ಕಾರದ ಸಹಾನುಭೂತಿ, ವಿಶಾಲ ಹೃದಯವಂತಿಕೆಯ ಅನುಪಸ್ಥಿತಿ ಎದ್ದು ಕಾಣುತ್ತದೆ ಎಂದು ಅವರು ಹೇಳಿದರು.