ನವದೆಹಲಿ: ಪಕ್ಷಕ್ಕೆ ಪೂರ್ಣಾವಧಿ ನಾಯಕತ್ವ ಬೇಕೆಂಬ ಕಾಂಗ್ರೆಸ್ ಹಿರಿಯ ನಾಯಕರ ಮನವಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ನೂತನ ಅಧ್ಯಕ್ಷರನ್ನು ಹುಡುಕಲು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖಂಡರು, ಸಂಸದರು, ಮಾಜಿ ಕೇಂದ್ರ ಸಚಿವರು ಸೇರಿದಂತೆ ಕಾಂಗ್ರೆಸ್ನ 23 ನಾಯಕರು ಪಕ್ಷದಲ್ಲಿ ಪೂರ್ಣಾವಧಿ, ದಕ್ಷ, ಪರಿಣಾಮಕಾರಿ ನಾಯಕತ್ವ ಹಾಗೂ ಸುಧಾರಣೆಗಳ ಅಗತ್ಯವಿದೆ ಎಂದು ಉಲ್ಲೇಖಿಸಿ, ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು.
ಪತ್ರದ ವಿಷಯಗಳನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲವಾದ್ರೂ, ಪಕ್ಷಕ್ಕೆ ಹೊಸ ಅಧ್ಯಕ್ಷರನ್ನು ಹುಡುಕಿಕೊಡಿ ಎಂದು ಹಿರಿಯ ನಾಯಕರಿಗೆ ಸೂಚಿಸಿ ಸೋನಿಯಾ ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ಸೋನಿಯಾ ಗಾಂಧಿ ತಮ್ಮ ಸ್ಥಾನದಿಂದ ಕೆಳಗಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ ನಾಳೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಈ ಗೊಂದಲಕ್ಕೆ ತೆರೆ ಬೀಳಲಿದೆ.