ಮುಂಬೈ: ಭಾರಿ ಮಳೆಯಿಂದಾಗಿ ಅಪಾರ್ಟ್ಮೆಂಟ್ವೊಂದರಲ್ಲಿ ಆಶ್ರಯ ಪಡೆದಿದ್ದ ಬೀದಿನಾಯಿಗೆ ಮನಬಂದಂತೆ ಥಳಿಸಿ ಕೊಂದಿರುವ ಅಮಾನುಷ ಘಟನೆಯೊಂದನ್ನು ನಟಿ ಸೋನಂ ಕಪೂರ್ ಅವರು ಇನ್ಸ್ಟಾಗ್ರಾಂ ಖಾತೆ ಮೂಲಕ ತಮ್ಮ ಹಿಂಬಾಲಕರ ಗಮಕ್ಕೆ ತಂದಿದ್ದು, ಜನರ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಬಾಂಬೆ ಪ್ರಾಣಿ ದಯಾ ಸಂಘವು ದೂರು ನೀಡಿದ್ದು ವರ್ಲಿಯಲ್ಲಿ ನಡೆದ ಈ ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಕಲಾಗಿದೆ. ಈ ಸಂಘಟನೆಗೆ ಸೋನಂ ಕಪೂರ್ ಅವರು ಸದಸ್ಯರೂ ಆಗಿದ್ದಾರೆ. ದಯವಿಟ್ಟು ಸಹಾಯ ಮಾಡಿ ಈ ಬಗ್ಗೆ ದೂರು ನೀಡಿದ್ದೇವೆ ಪೊಲೀಸರು ಈಗ ನಮ್ಮ ಕರೆ ಸ್ವೀಕರಿಸುತ್ತಿಲ್ಲ, ನಮ್ಮ ಪ್ರಯತ್ನಕ್ಕೆ ನಿಮ್ಮ ನೆರವು ಬೇಕು ಎಂದು ಪೋಸ್ಟ್ ಹಾಕಿದ್ದಾರೆ.
ಘಟನೆಯ ವಿವರ: ಜುಲೈ 24ರಂದು ವರ್ಲಿಯ ನೆಹರು ಪ್ಲಾನೆಟೇರಿಯಂನ ವಿಟೆಸ್ಸೆ ಶೋ ರೂಂ ಪಕ್ಕದಲ್ಲಿರುವ ಟರ್ಫ್ ವ್ಯೂ ಕಟ್ಟಡದ ಎರಡನೇ ಮಹಡಿಯ ನಿವಾಸಿ ಭಾಟಿಯ ತಮ್ಮ ಕಟ್ಟದಲ್ಲಿ ಭಾರೀ ಮಳೆಯಿಂದಾಗಿ ಆಶ್ರಯ ಪಡೆದಿದ್ದ ಶ್ವಾನಕ್ಕೆ ಹೊಡಿಯುವಂತೆ ಆತನ ಮನೆಯ ವಾಚ್ಮನ್ಗೆ ತಿಳಿಸಿದ್ದು, ಆತನ ಸೂಚನೆಯ ಮೇರೆಗೆ ವಾಚ್ಮನ್ ಶ್ವಾನದ ಮೇಲೆ ಕ್ರೌರ್ಯ ಮೆರೆದಿದ್ದ.
ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಬಾಂಬೆ ಅನಿಮಲ್ ರೈಟ್ಸ್ ಜುಲೈ 27ರಂದು ಸೆಕ್ಷನ್ 429 ಮತ್ತು 34ರ ಅಡಿಯಲ್ಲಿ ಭಾಟಿಯಾ ಹಾಗೂ ಕಟ್ಟಡದ ಭದ್ರತಾ ಸಿಬ್ಬಂದಿ ವಿರುದ್ಧ ವರ್ಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಆದರೆ ಇಬ್ಬರು ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದು,ಇವರ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ ಹೀಗಾಗಿ ಅನಿಮಲ್ ರೈಟ್ ಪ್ರತಿಭಟನೆಗೆ ಮುಂದಾಗಿದೆ. ಈ ಕ್ರೌರ್ಯವನ್ನ ವಿರೋಧಿಸಿ ಪ್ರತಿಭಟನೆ ನಡೆಸಲು ಮಂಗಳವಾರ ಟರ್ಫ್ ಕಟ್ಟಡದ ಹತ್ತಿರ ಸೇರುವಂತೆ ಬಾಂಬೆ ಅನಿಮಲ್ ರೈಟ್ ಗುಂಪು ಪ್ರತಿಭಟನಾ ಕರೆ ನೀಡಿದೆ. ಈ ಘಟನೆಯನ್ನ ಬಾಲಿವುಡ್ ನಟ ಜಾನ್ ಅಬ್ರಹಾಂ ಮತ್ತು ಅನುಷ್ಕಾ ಶರ್ಮಾ ಕೂಡ ತೀವ್ರವಾಗಿ ಖಂಡಿಸಿದ್ದಾರೆ.