ಮುಂಬೈ: ನಕಲಿ ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್‌ಪಿ) ದಂಧೆ ಪ್ರಕರಣದಲ್ಲಿ ಮುಂಬೈ ಪೊಲೀಸರ ಅಪರಾಧ ವಿಭಾಗ ಶುಕ್ರವಾರ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದದ್ದು, ಈ ಪ್ರಕರಣದಲ್ಲಿ ಇಲ್ಲಿಯವರೆಗೆ 6 ಮಂದಿ ಬಂಧನಕ್ಕೊಳಗಾಗಿದ್ದಾರೆ.
ಉಪನಗರ ಅಂಧೇರಿ ನಿವಾಸಿ ಉಮೇಶ್ ಮಿಶ್ರಾ ಎಂಬಾತನನ್ನು ವಿರಾರ್ ಪ್ರದೇಶದ ಅಪರಾಧ ವಿಭಾಗದ ತಂಡವು ಬಂಧಿಸಿದೆ.
ನಿರ್ದಿಷ್ಟ ಸುದ್ದಿ ವಾಹಿನಿಯನ್ನು ವೀಕ್ಷಿಸಲು ವೀಕ್ಷಕರ ಡೇಟಾವನ್ನು ಸಂಗ್ರಹಿಸುವ ಮನೆ ಮೀಟರ್‌ಗಳನ್ನು ಸ್ಥಾಪಿಸಿದ ಜನರಿಗೆ ಮಿಶ್ರಾ ಲಂಚ ನೀಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೇಟಿಂಗ್ ಏಜೆನ್ಸಿ ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಹನ್ಸಾ ರಿಸರ್ಚ್ ಗ್ರೂಪ್ ಮೂಲಕ ಪೊಲೀಸರಿಗೆ ದೂರು ನೀಡಿದಾಗ, ಕೆಲವು ಚಾನೆಲ್‌ಗಳು ಜಾಹೀರಾತುದಾರರಿಗೆ ಆಮಿಷವೊಡ್ಡಲು ಟಿಆರ್‌ಪಿ ಸಂಖ್ಯೆಯನ್ನು ಯುಕ್ತಿಯಿಂದ ಬದಲಾವಣೆ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದ ಬಳಿಕ ನಕಲಿ ಟಿಆರ್‌ಪಿ ಹಗರಣ ಬೆಳಕಿಗೆ ಬಂದಿದೆ.
ವೀಕ್ಷಕರ ಡೇಟಾವನ್ನು ಸಂಗ್ರಹಿಸಲು ಮೀಟರ್ ಸ್ಥಾಪಿಸಲಾದ ಕೆಲವು ಮನೆಗಳಲ್ಲಿ ನಿರ್ದಿಷ್ಟ ಚಾನೆಲ್‌ಗೆ ಟ್ಯೂನ್ ಮಾಡಲು ಲಂಚ ನೀಡಲಾಗಿದೆ ಎಂದು ಆರೋಪಿಸಲಾಗಿದೆ.