ದೆಹಲಿ: ಚಿಕಿತ್ಸೆ ಸಲುವಾಗಿ ಪಠನಾದಿಂದ ದೆಹಲಿಗೆ ವಿಮಾನದಲ್ಲಿ ಕರೆದೊಯ್ಯುವ ವೇಳೆ ಆರು ತಿಂಗಳ ಹಸುಗೂಸೊಂದು ಮೃತಪಟ್ಟಿದೆ.
ಮಗು ರಚಿತಾ ಕುಮಾರಿ ಮತ್ತು ಕುಟುಂಬಸ್ಥರು ಬೆಗುಸರಾಯ್ ಮೂಲದವರೆಂದು ಗುರುತಿಸಲಾಗಿದೆ. ಮೃತಪಟ್ಟ ಮಗು ಹೃದ್ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆ ಸಲುವಾಗಿ ದೆಹಲಿಗೆ ಕರೆತರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆಯೆಂದು ಐಜಿಐ ವಿಮಾನ ನಿಲ್ದಾಣದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸಂಜಯ್ ಭಾಟಿಯಾ ತಿಳಿಸಿದ್ದಾರೆ.
ಮಗು ರಚಿತಾ ಕುಮಾರಿ ಹುಟ್ಟಿನಿಂದ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಳು. ಆಕೆಯ ಹೃದಯದಲ್ಲಿ ಸಣ್ಣ ರಂಧ್ರವಿದ್ದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ದುರಾದೃಷ್ಟವಶಾತ್ ದೆಹಲಿಗೆ ಹೊರಟ ಸ್ಪೈಸ್ ಜೆಟ್ ವಿಮಾನ ಸಂಖ್ಯೆ ಎಸ್‌ಜಿ 8481ರಲ್ಲಿ ಮಗು ಮೃತಪಟ್ಟಿದ್ದು, ತಂದೆ ರಾಜೇಂದ್ರ ರಾಜನ್ ಮತ್ತು ತಾಯಿ ಡಿಂಪಲ್ ಮಗುವನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ.