ಮುಂಬೈ (ಮಹಾರಾಷ್ಟ್ರ): ಲಡಾಖ್‌ನಲ್ಲಿ ಪ್ರಸ್ತುತ ಪರಿಸ್ಥಿತಿ 1962ರಂತೆ ಗಂಭೀರವಾಗಿದೆ. ಇದು ಭಾರತ-ಚೀನಾ ಯುದ್ಧವನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ ಎಂದು ಶಿವಸೇನೆಯ ಮುಖವಾಣಿ ಸಾಮ್ನಾ ವಿವವರಿಸಿದೆ.
ಭಾರತೀಯ ಸೇನೆಯು ಇತಿಹಾಸವನ್ನು ಪುನರಾವರ್ತಿಸಲು ಅವಕಾಶ ನೀಡುವುದಿಲ್ಲ ಎಂದಿದೆ. ಭಾರತವು ಈಗ ಹೆಚ್ಚು ಶಕ್ತಿ ಶಾಲಿಯಾಗಿದೆ ಎಂದು ಒಪ್ಪಿಕೊಂಡಿದ್ದರೂ ಕೂಡ, ಚೀನಾದ "ಒಳನುಸುಳುವಿಕೆ" ಮತ್ತು "ಭೂ ಕಬಳಿಕೆ" ಚಟುವಟಿಕೆಗಳು ಕಡಿಮೆಯಾಗಿಲ್ಲ ಎಂದು ಮುಖವಾಣಿ ಸಾಮ್ನಾ ಹೇಳಿದೆ.
ಚೀನಿ ಡ್ರ್ಯಾಗನ್ ಉಪಟಳ ಇನ್ನೂ ನಿಂತಿಲ್ಲ, ಅವರ ಉದ್ದೇಶ ಬದಲಾಗಿಲ್ಲ. ಚೀನಾ-ಭಾರತ ಪರಸ್ಪರ ಚರ್ಚೆ ನಡೆಸಿರಬಹುದು. ಆದರೆ, ಉಭಯ ದೇಶಗಳ ಸೇನೆ ಲಡಾಖ್ ಗಡಿಯಲ್ಲಿದೆ. ಚೀನಾ ಸೇನೆ ಗಡಿಯಿಂದ ಹಿಂದೆ ಸರಿದಿದೆ ಎಂದು ಭಾರತ ಹೇಳುತ್ತಿದೆ. ಆದರೆ, ಲಡಾಖ್ನ ಫಿಂಗರ್ ಫೋರ್ನಿಂದ ಭಾರತೀಯ ಸೇನೆ ಮೊದಲು ಹಿಂದೆ ಸರಿಯಬೇಕೆಂದು ಚೀನಾ ವಾದಿಸುತ್ತಿದೆ ಎಂದು ಸಾಮ್ನಾ ಸಂಪಾದಕೀಯದಲ್ಲಿ ತಿಳಿಸಲಾಗಿದೆ.
ಭಾರತ 1962 ರಂತೆ ಇಲ್ಲ, ಅದಕ್ಕಿಂತಲೂ ಶಕ್ತಿ ಶಾಲಿಯಾಗಿದೆ. ಇದನ್ನು ಒಪ್ಪಿಕೊಂಡರೂ ಚೀನಾದ ಒಳ ನುಸಳುವಿಕೆ ಮತ್ತು ಭೂ ಕಬಳಿಕೆ ಚಟುವಟಿಕೆಗಳು ಕಡಿಮೆಯಾಗಿಲ್ಲ. 1962 ರ ಇತಿಹಾಸವನ್ನು ಪುನರಾವರ್ತಿಸಲು ಭಾರತೀಯ ಸೇನೆ ಈಗ ಅನುಮತಿಸುವುದಿಲ್ಲ. ಆದರೆ, ಪ್ರಸ್ತುತ ಲಡಾಖ್‌ನಲ್ಲಿ ಪರಿಸ್ಥಿತಿ ಉದ್ವಿಗ್ನತೆಯಿಂದ ಕೂಡಿದೆ, ಅದನ್ನು ನಿರಾಕರಿಸಲು ಆಗುವುದಿಲ್ಲ ಎಂದಿದೆ. ಜೂನ್ 15 ರಂದು ಗಾಲ್ವಾನ್ ವ್ಯಾಲಿಯಲ್ಲಿ ಚೀನಾ ಸೈನಿಕರ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಆ ಬಳಿಕ ಗಡಿಯಲ್ಲಿ ಬಿಗುವಿನ ವಾತಾವರಣ ಮುಂದುವರೆದಿದೆ. ಜೂನ್ನಲ್ಲಿ ಲಡಾಖ್ನ ಕೆಲ ಪ್ರದೇಶಗಳನ್ನು ಚೀನಿಯರು ಕಬಳಿಸಿದ ಬಳಿಕವಷ್ಟೇ ಅವರ ಆಕ್ರಮಣಕಾರಿ ಉದ್ದೇಶಗಳು ಸ್ಪಷ್ಟವಾಯಿತು ಎಂದಿದೆ.
ನಮ್ಮ ಸೈನ್ಯವು ಸರ್ವ ಸನ್ನದ್ಧವಾಗಿದೆ. ಪ್ರಧಾನ ಮಂತ್ರಿಗಳು, ಸೇನಾ ಮುಖ್ಯಸ್ಥರು ಗಡಿಗೆ ಭೇಟಿ ನೀಡಿ ಸೈನಿಕರಿಗೆ ಮನೋಸ್ಥೈರ್ಯ ತುಂಬಿದ್ದಾರೆ. ಭಾರತೀಯ ವಾಯುಪಡೆಯ ಹೊಸ ಅತಿಥಿ 'ರಫೇಲ್' ಗಡಿಯ ಮೇಲ್ವಿಚಾರಣೆ ಮಾಡುವ ಮೂಲಕ ಡ್ರ್ಯಾಗನ್ಗೆ ಸವಾಲು ಹಾಕಿದೆ. ಚೀನಾದ ಆ್ಯಪ್ಗಳನ್ನು ನಿಷೇಧಿಸುವ ಮೂಲಕ ಭಾರತ ಚೀನಾಕ್ಕೆ ಆರ್ಥಿಕ ಆಘಾತವನ್ನು ನೀಡಿದೆ.
ಗಾಲ್ವಾನ್ ವ್ಯಾಲಿಯಲ್ಲಿ ಘರ್ಷಣೆಯ ಬಳಿಕ ಚೀನಾ ಗಡಿಯಿಂದ ಸ್ವಲ್ಪ ಹಿಂದೆ ಸರಿದೆ ಎಂದು ಹೇಳಲಾಗ್ತಿದೆ. ಚೀನಾ ಹೀಗೆ ಮಾಡಿದರೆ ದೇಶಾದ್ಯಂತ ಉತ್ತಮ ವಾತಾವರಣ ನಿರ್ಮಾಣವಾಗಬಹುದು. ಗಡಿ ವಿಚಾರದ ಬಗ್ಗೆ ಮಾತನಾಡಿದ ವಿದೇಶಾಂಗ ಸಚಿವ ಜೈ ಶಂಕರ್ ಲಡಾಖ್‌ನಲ್ಲಿ 1962 ರ ನಂತರ ಮೊದಲ ಬಾರಿಗೆ ಪರಿಸ್ಥಿತಿ ಗಂಭೀರವಾಗಿದೆ ಎಂದಿದ್ದಾರೆ. ಇದು ಚೀನಾ-ಭಾರತದ ಗಡಿ ಸಮಸ್ಯೆ ಇನ್ನೂ ಇತ್ಯರ್ಥಗೊಂಡಿಲ್ಲ ಎಂಬುದನ್ನು ಸೂಚಿಸುತ್ತದೆ ಎಂಬುದನ್ನು ಪತ್ರಿಕೆ ಉಲ್ಲೇಖಿಸಿದೆ.