ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಕೂಡಾ ವಿಶೇಷ ಸುದ್ದಿಗೋಷ್ಟಿ ನಡೆಸಲಿದ್ದು, ಸ್ವಾವಲಂಬಿ ಭಾರತಕ್ಕೆ ಘೋಷಣೆಯಾಗಿರುವ ವಿಶೇಷ ಪ್ಯಾಕೇಜ್‌ನ ಉಳಿದ ವಿವರ ನೀಡಲಿದ್ದಾರೆ. ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಅವರು ಅತಿ ಸಣ್ಣ, ಸಣ್ಣ ಮಧ್ಯಮ ಕೈಗಾರಿಕೆಗಳು ಸೇರಿದಂತೆ ವಿವಿಧ ವಲಯಗಳಿಗೆ ಆದ್ಯತೆ ನೀಡಿರುವ ಸುಮಾರು 5.5 ಲಕ್ಷ ಕೋಟಿ ರೂ ಪ್ಯಾಕೇಜ್ ಪ್ರಕಟಿಸಿದ್ದರು.
ಆದಾಯ ತೆರಿಗೆ ದಿನಾಂಕ ವಿಸ್ತರಣೆ: ನವೆಂಬರ್ 30ರವರೆಗೆ ತೆರಿಗೆ ಕಟ್ಟಲು ಅವಕಾಶ
ಇಂದು ನಡೆಸಲಿರುವ ಸುದ್ದಿಗೋಷ್ಟಿಯಲ್ಲಿ ಪ್ರಮುಖವಾಗಿ ದೇಶದ ಆಧಾರಸ್ತಂಭವಾಗಿರುವ ಕೃಷಿ ಮತ್ತು ಅಸಂಘಟಿತ ಕಾರ್ಮಿಕರು, ವಲಸೆ ಕಾರ್ಮಿಕರು, ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ವಾಹನೋದ್ಯಮದ ಬಗ್ಗೆ ಮಾತನಾಡುವ ಸಾಧ್ಯತೆ ಇದೆ.
ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಅತಿಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಅಡಮಾನ ರಹಿತ ಸಾಲ ನೀಡುವ ಬಗ್ಗೆ ಅವರು ಮಾತನಾಡಿದ್ದು, ಅದರ ಮರುಪಾವತಿಗೆ 4 ವರ್ಷಗಳವರೆಗೆ ಕಾಲಾವಕಾಶ ಪ್ರಕಟಿಸಿದ್ದರು. ಇದರ ಜತೆಗೆ ಆದಾಯ ತೆರಿಗೆ ಕಟ್ಟಲು ನೀಡಲಾಗಿದ್ದ ದಿನಾಂಕ ವಿಸ್ತರಣೆ, ಪಿಎಫ್ ಹಣದಲ್ಲಿ ಕಡಿತ ಸೇರಿ ಅನೇಕ ವಿಷಯಗಳನ್ನು ವಿವರಿಸಿದ್ದರು.