ಮುಂಬೈ: ಮಹಾರಾಷ್ಟ್ರ ದೇಶದಲ್ಲೇ ಅತಿಹೆಚ್ಚು ಕೊರೊನಾ ಪ್ರಕರಣಗಳನ್ನು ಹೊಂದಿದೆ. ಇಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಒಂದೇ ಒಂದು ಸಾವು ಪ್ರಕರಣ ಕೂಡ ವರದಿಯಾಗಿಲ್ಲ.
ಜೂನ್ 10ರ ವೇಳೆಗೆ ಮಹಾರಾಷ್ಟ್ರದಲ್ಲಿ 94 ಸಾವಿರ ಕೊರೊನಾ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 2,985 ಮಂದಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದಾರೆ. ಇದರರ್ಥ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸೋಂಕಿಗೆ ತುತ್ತಾಗಿರುವ ಪ್ರಮಾಣ ಶೇ 3.3 ರಷ್ಟಿದೆ.
ಮಕ್ಕಳಿಗೆ ಸೋಂಕು ತಗುಲುವ ಪ್ರಮಾಣ ಕಡಿಮೆ ಇದ್ದರೂ ಕೂಡ ರೋಗಕ್ಕೆ ತುತ್ತಾಗುವುದನ್ನು ತಡೆಯಲು ಇನ್ನೂ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ಶಿಶು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ತಡೆಗಟ್ಟಬಹುದಾದ ಇತರ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸಲು ಪೋಷಕರು ಲಸಿಕೆ ಹಾಕಿಸಬೇಕು ಎಂದು ಜೆ.ಜೆ.ಆಸ್ಪತ್ರೆಯ ಡೀನ್ ಡಾ.ಪಲ್ಲವಿ ಸಾಪ್ಲೆ ಹೇಳಿದ್ದಾರೆ. ಲಾಕ್ಡೌನ್ ಮತ್ತು ಕೊರೊನಾ ವೈರಸ್ ಭಯದಿಂದಾಗಿ ಅನೇಕ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಲು ಮುಂದೆ ಬಂದಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಕಡಿಮೆ ಇರುವುದು ಉತ್ತಮ ಸೂಚನೆ ಎಂದು ಮಹಾರಾಷ್ಟ್ರ ವೈದ್ಯಕೀಯ ಮಂಡಳಿಯ ಅಧ್ಯಕ್ಷ ಡಾ.ಶಿವಕುಮಾರ್ ಉತ್ತೂರೆ ಹೇಳಿದ್ದಾರೆ.
10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾನ್ಯವಾಗಿ ಲಸಿಕೆ ನೀಡಲಾಗುತ್ತದೆ ಮತ್ತು ಅವರ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಆದರೂ ಈ ವಯಸ್ಸಿನ ಮಕ್ಕಳಿಗೆ ಸೋಂಕು ತಗುಲುವ ಸಾಧ್ಯತೆ ಇಲ್ಲ ಎಂದಲ್ಲ; ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ ಎಂದಿದ್ದಾರೆ.