ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1.25 ಲಕ್ಷ ದಾಟಿದ ನಂತರ ಸಿಕ್ಕಿಂನಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿದೆ.
ಸೋಂಕಿತ ವ್ಯಕ್ತಿಯು ದಕ್ಷಿಣ ಸಿಕ್ಕಿಂನ ನಿವಾಸಿ ಎಂದು ಗುರುತಿಸಲಾಗಿದೆ. ಈತ ಇತ್ತೀಚೆಗಷ್ಟೆ ದೆಹಲಿಗೆ ಪ್ರಯಾಣ ಬೆಳೆಸಿದ್ದ ಎಂಬ ಮಾಹಿತಿ ಲಭಿಸಿದೆ.
ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 6,654 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ಭಾರತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW)ಶನಿವಾರ ವರದಿ ಮಾಡಿದೆ. ಇದು ಭಾರತದ ಅತಿ ಹೆಚ್ಚು ಏಕದಿನ ಹೆಚ್ಚಳವಾಗಿದೆ. ಆ ಮೂಲಕ ದೃಢ ಪಟ್ಟಿರುವ ಪ್ರಕರಣಗಳ ಸಂಖ್ಯೆ 1,25,101ಕ್ಕೆ ತಲುಪಿದೆ. ಇದರಲ್ಲಿ 69,597 ಸಕ್ರಿಯ ಪ್ರಕರಣಗಳು, 51,783 ಸೋಂಕು ಮುಕ್ತವಾದವರು ಮತ್ತು 3,720 ಸಾವುಗಳನ್ನು ಒಳಗೊಂಡಿದೆ.
ಶುಕ್ರವಾರ ಮತ್ತು ಶನಿವಾರ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ದೇಶದಾದ್ಯಂತ 1.15 ಲಕ್ಷ (1,15,364) ಮಾದರಿಗಳನ್ನು ಪರೀಕ್ಷಿಸಿದೆ ಆ ಮೂಲಕ ಸದ್ಯ ಭಾರತದಲ್ಲಿ ಪರೀಕ್ಷಿಸಲಾದ ಒಟ್ಟು ಮಾದರಿಗಳ ಸಂಖ್ಯೆ ಮೇ.23ರ ವೇಳೆಗೆ 28,34,798 ತಲುಪಿದೆ.