ಹೈದರಾಬಾದ್: ಕಡಿಮೆ ಪ್ರಮಾಣದ ಹೂಡಿಕೆಯನ್ನು ಬಳಸಿಕೊಂಡು ಸ್ವಯಂ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಮತ್ತು ವಿವಿಧ ರೀತಿಯ ಸಾಮಗ್ರಿಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ದೇಶದ ಆರ್ಥಿಕತೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದೆ. ಈ ಉದ್ಯಮವು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಖಚಿತಪಡಿಸಿದ್ದರೂ, ಅವುಗಳ ಸ್ಥಿತಿ ಇನ್ನೂ ಸುಧಾರಿಸಿಲ್ಲ.
ಈಗಾಗಲೇ ಹಲವು ವರ್ಷಗಳಿಂದ ಸಂಕಷ್ಟದಲ್ಲಿದ್ದ ಸಣ್ಣ ಪ್ರಮಾಣದ ಉದ್ಯಮಗಳಿಗೆ ಕೊರೊನಾ ಸಾಂಕ್ರಾಮಿಕ ರೋಗವು ಆಘಾತವನ್ನೇ ಉಂಟು ಮಾಡಿದೆ. ಇತ್ತೀಚೆಗೆ ಘೋಷಿಸಿದ ವಿಶೇಷ ಪ್ಯಾಕೇಜ್ ಕೂಡ ಅವರಿಗೆ ಅಗತ್ಯ ನೆರವು ನೀಡಲು ಸಾಧ್ಯವಾಗಿಲ್ಲ ಎಂದು ಮೂಡೀಸ್ ವಿಶ್ಲೇಷಣೆ ಹೇಳಿದೆ. ದೇಶದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುತ್ತಿರುವ ಸಣ್ಣ ಉದ್ಯಮಗಳಿಗೆ ನೆರವು ನೀಡಲು ಸರ್ಕಾರದಿಂದ ವ್ಯವಸ್ಥಿತವಾಗಿ ಯೋಜನೆ ಇಲ್ಲ ಎಂದು ಇತ್ತೀಚೆಗೆ ಭಾರತೀಯ ಉದ್ಯಮಗಳ ಸಂಘಟನೆ (ಸಿಐಐ) ವರದಿಯು ಹೇಳಿದೆ. ಆರ್ಥಿಕ ಪ್ರಗತಿಯಲ್ಲಿ ಕೊಡುಗೆ ನೀಡುವ ಇವುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕನಿಷ್ಠ ಮೂರು ವರ್ಷಗಳವರೆಗೆ ಎಲ್ಲ ನಿಯಮಾವಳಿಗಳಿಂದ ಎಂಎಸ್‌ಎಂಇಗಳಿಗೆ ವಿನಾಯಿತಿ ನೀಡಬೇಕು ಎಂದು ಸಿಐಐ ಮುಖ್ಯವಾಗಿ ಶಿಫಾರಸು ಮಾಡಿದೆ.
ಆತ್ಮನಿರ್ಭರ್ ಅಭಿಯಾನ ಪ್ಯಾಕೇಜ್ ಘೋಷಣೆ ಮಾಡಿದ ಆರು ವಾರಗಳ ನಂತರವೂ, ಕೇವಲ ಎಂಟು ಶೇಕಡಾ ಸಾಲ ಬಟವಾಡೆ ಮಾಡಲಾಗಿದೆ. ಆದರೆ, ಮೂರು ಲಕ್ಷ ಕೋಟಿ ರೂಪಾಯಿ ಸಾಲ ಬಟವಾಡೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ದೈನಂದಿನ ನಿರ್ವಹಣೆಗೆ ಹಣಕಾಸಿನ ಕೊರತೆ, ಹಳೆಯ ಸಾಲದ ಮೇಲೆ ಬಡ್ಡಿಯ ಹೊರೆ ಮತ್ತು ಕಚ್ಚಾ ಸಾಮಗ್ರಿಗಳ ಕೊರತೆ ಮತ್ತು ಕೌಶಲ ಕಾರ್ಮಿಕರ ಕೊರೆಯಿಂದಾಗಿ ಸಣ್ಣ ಉದ್ಯಮಗಳು ತೀರಾ ಸಂಕಷ್ಟದ ಸ್ಥಿತಿಯಲ್ಲಿವೆ. ಅಗತ್ಯ ನೆರವನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರಗಳು ಪ್ರಯತ್ನಿಸಬೇಕಿದೆ ಮತ್ತು ಈ ಉದ್ಯಮ ಚೇತರಿಸಿಕೊಳ್ಳಲು ನೆರವಾಗಬೇಕಿದೆ.
ದೇಶದ ಒಟ್ಟು ಕಾರ್ಯಪಡೆಯ ಪೈಕಿ 45 ಕೋಟಿ ಉದ್ಯೋಗಿಗಳು (ಶೇ. 90) ಅಸಂಘಟಿತ ವಲಯದಲ್ಲಿದ್ದಾರೆ ಮತ್ತು ಈ ಪೈಕಿ 40 ಶೇಕಡಾ ಉದ್ಯೋಗಿಗಳು ಸಣ್ಣ ಉದ್ಯಮದಲ್ಲಿದ್ದಾರೆ. ಸಣ್ಣ ಉದ್ಯಮಗಳ ಪಾಲು ಜಿಡಿಪಿಯಲ್ಲಿ ಶೇ. 30 ಆಗಿದೆ ಮತ್ತು ಶೇ. 40 ರಷ್ಟು ರಫ್ತು ಗಳಿಕೆಯು ಇವರ ಪ್ರಾಮುಖ್ಯತೆಯನ್ನು ಮತ್ತು ದೇಶಕ್ಕೆ ಇವುಗಳ ಕೊಡುಗೆಯನ್ನು ಸೂಚಿಸುತ್ತದೆ. ಇಂತಹ ಪ್ರಮುಖ ವಲಯವು ಕೊರೊನಾದ ಪರಿಣಾಮವನ್ನು ಎದುರಿಸುತ್ತಿದೆ ಮತ್ತು ಸಂಪೂರ್ಣ ಸ್ಥಗಿತಗೊಳ್ಳುವುದರಿಂದ ರಕ್ಷಿಸಿಕೊಳ್ಳಲು ಆರಂಭಿಕ ಹೂಡಿಕೆಯ ಖಚಿತತೆಯನ್ನು ಇವು ಬಯಸುತ್ತಿವೆ. ಆದರೆ, ಇವುಗಳ ಬೇಡಿಕೆಯನ್ನು ಪೂರೈಸಲಾಗುತ್ತಿಲ್ಲ.
ಶೇ.50 ರಷ್ಟು ಅರ್ಹ ಸಾಲವನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಮತ್ತು ವಿದ್ಯುತ್ ಶುಲ್ಕವನ್ನು ಯೂನಿಟ್‌ಗಳು ಮುಚ್ಚಿದ ಸಮಯದವರೆಗೆ ರದ್ದು ಮಾಡಬೇಕು ಎಂದು ಸಿಬ್ಬಂದಿಯ ಸಂಬಳವನ್ನು ಪಾವತಿ ಮಾಡಲು ಅಸಾಧ್ಯವಾದ ಸಣ್ಣ ಉದ್ಯಮಗಳು ಬೇಡಿಕೆ ಇಟ್ಟಿವೆ. ರಿಸರ್ವ್ ಬ್ಯಾಂಕ್ ಈಗಾಗಲೇ ಶೇಕಡಾ ನಾಲ್ಕರಷ್ಟು ರೆಪೋ ರೇಟ್ ಕಡಿಮೆ ಮಾಡಿವೆ. ಆದರೆ ಸಣ್ಣ ವ್ಯಾಪಾರಿಗಳು ಮತ್ತು ಸಂಸ್ಥೆಗಳಿಗೆ ಶೇ. 8-14 ರ ದರದಲ್ಲಿ ಬಡ್ಡಿ ವಿಧಿಸುತ್ತಿವೆ. ಜಿಎಸ್‌ಟಿ ಸಂಗ್ರಹದ ಶೇ. 30 ರಷ್ಟನ್ನು ಸನ್ಣ ಉದ್ಯಮಗಳಿಂದ ಸಂಗ್ರಹಿಸಲಾಗುತ್ತಿದೆ ಎಂಬುದನ್ನು ನಾವು ಗಮನಿಸಬೇಕು.
ಕೇಂದ್ರವು ಸಮಗ್ರವಾದ ಉತ್ತೇಜನ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಸಿಐಐ ಶಿಫಾರಸುಗಳ ಪ್ರಕಾರ ಎಂಎಸ್‌ಎಂಇಗಳ ಪುನಶ್ಚೇತನಕ್ಕೆ ಸಕ್ರಿಯವಾಗಿ ಶ್ರಮಿಸಬೇಕು. ಈ ಸನ್ನಿವೇಶವನ್ನು ಎದುರಿಸಲಾಗದೇ ಶೇ. 70 ಕ್ಕೂ ಹೆಚ್ಚು ಸಣ್ಣ ಯೂನಿಟ್‌ಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ಆಧುನಿಕ ಸವಾಲುಗಳನ್ನು ಎದುರಿಸಲು ಅಗತ್ಯ ಕೌಶಲಗಳ ತರಬೇತಿ ನೀಡಲು ವಿಶೇಷ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು ಎಂಬ ಸಲಹೆಯನ್ನೂ ಮಾಡಲಾಗಿದೆ. ಎಂಎಸ್‌ಎಂಇ ಪುನಶ್ಚೇತನವೇ ಭಾರತಕ್ಕೆ ಸದ್ಯ ಅಗತ್ಯವಿರುವ ಅಂಶವಾಗಿದೆ. ಕೋವಿಡ್ ವಿಪತ್ತಿನ ಸವಾಲನ್ನು ಅವಕಾಶವನ್ನಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿರುವ ಮೋದಿ ಸರ್ಕಾರ ಸಣ್ಣ ಉದ್ಯಮವನ್ನು ಬೇಷರತ್ತಾಗಿ ಉತ್ತೇಜಿಸಬೇಕಿದೆ.