ಗಡ್ಚಿರೋಲಿ(ಮಹಾರಾಷ್ಟ್ರ): ಮಗಳ ಅಂತರ್ಜಾತಿ ಪ್ರೇಮ ವಿವಾಹದಿಂದ ನೊಂದಿರುವ ಆಕೆಯ ಪೋಷಕರು ಮತ್ತು ಸಹೋದರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನಂದ್ ನಗರದಲ್ಲಿ ನಡೆದಿದೆ.
ಕುಟುಂಬಸ್ಥರ ಸಾವಿನ ಸುದ್ದಿ ಕೇಳುತಿದ್ದಂತೆ, ನೂತನವಾಗಿ ವಿವಾಹವಾದ ವಧು-ವರ ಕೂಡ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ನವ ದಂಪತಿಗಳನ್ನು ರಕ್ಷಣೆ ಮಾಡಲಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಪೊಲೀಸ್ ಅಧಿಕಾರಿ ಶಾಲಿನಿ ಇಂಗೋಲ್ ತಿಳಿಸಿದ್ದಾರೆ.
ವರ್ಗಂಟಿವಾರ್(52), ವೈಶಾಲಿ(43) ಮತ್ತು ಸಾಯಿರಾಂ(19) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ವರ್ಗಂಟಿವಾರ್ ಅವರ ಪುತ್ರಿ ಪ್ರನಳಿ ಪದವಿ ಶಿಕ್ಷಣ ಮುಗಿಸಿದ ನಂತರ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಯುವಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಪರಸ್ಪರ ಪ್ರೀತಿಸಿದ ಈ ಇಬ್ಬರು ಮದುವೆ ಆಗಿರುತ್ತಾರೆ.
ಸೋಮವಾರ ಈ ಇಬ್ಬರು ವಿವಾಹವಾದ ಸುದ್ದಿ ತಿಳಿದ ಪ್ರನಳಿ ಕುಟುಂಬಸ್ಥರು ಆತ್ಮಹತ್ಯೆ ನಿರ್ಧಾರ ಮಾಡಿ ತಾವು ಬಾಡಿಗೆಗೆ ಇದ್ದ ಮನೆ ಮಾಲೀಕರಿಗೆ ಕರೆಮಾಡಿ ವಿಷಯ ತಿಳಿಸಿ ಸಾವನ್ನಪ್ಪಿದ್ದಾರೆ.