ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು ಮತ್ತಷ್ಟು ತೀವ್ರಗೊಂಡಿದ್ದು, ಬಿಜೆಪಿ-ಶಿವಸೇನೆ ನಡುವೆ ಇಲ್ಲಿಯವರೆಗೂ ಯಾವುದೇ ರೀತಿಯ ಒಮ್ಮತದ ನಿರ್ಧಾರ ಮೂಡಿ ಬಂದಿಲ್ಲ. ಈ ನಡುವೆ ಶಿವಸೇನೆ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿದ್ದು ರಾಜ್ಯಪಾಲರ ಭೇಟಿಗೆ ಅಣಿಯಾಗಿದೆ.
ಶಿವಸೇನೆ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಏಕನಾಥ್ ಶಿಂಧೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಮಹಾರಾಷ್ಟ್ರ ಮುಖ್ಯಮಂತ್ರಿ ಆಗುವುದಿಲ್ಲ ಎಂಬುದು ಖಚಿತವಾಗಿದೆ. ಇದೇ ವೇಳೆ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ 29 ವರ್ಷದ ಠಾಕ್ರೆ ಸದ್ಯ ಸರ್ಕಾರ ರಚನೆಯ ಭಾಗವಾಗಿರುವುದಿಲ್ಲ ಎನ್ನುವುದೂ ಗೊತ್ತಾಗಿದೆ.
ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕರಾಗಲು ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ ಅಥವಾ ಸುಭಾಶ್ ದೇಸಾಯಿ ಹೆಸರುಗಳನ್ನು ಅಂತಿಮಗೊಳಿಸಲಾಗಿತ್ತು. ಈ ಇಬ್ಬರೂ ಸಹ ಈ ಹಿಂದಿನ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಇನ್ನು ಶಿವಸೇನೆ ನೇತೃತ್ವದಲ್ಲಿ ಅಧಿಕಾರ ಗದ್ದುಗೆ ಹಿಡಿಯಲು ಶರದ್ ಪವಾರ್ ನೇತೃತ್ವದ ಎನ್ಸಿಪಿ ಹಾಗು ಕಾಂಗ್ರೆಸ್ ಜತೆ ಮಾತುಕತೆ ಮುಂದುವರಿದಿದ್ದು, ಒಂದ್ವೇಳೆ ಅವರು ಶಿವಸೇನೆ ಅಭ್ಯರ್ಥಿಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಲು ಮುಂದಾದರೆ ನಾವು ಅವರ ಜತೆ ಕೈಜೋಡಿಸುತ್ತೇವೆ ಎಂದು ಉದ್ಧವ್ ಠಾಕ್ರೆ ಈಗಾಗಲೇ ಹೇಳಿದ್ದಾರೆ.
ಈ ನಡುವೆ ಸಂಜೆ 6ಗಂಟೆಗೆ ಶಿವಸೇನೆ ಪಕ್ಷದ ಶಾಸಕರು ಆದಿತ್ಯ ಠಾಕ್ರೆ ನೇತೃತ್ವದಲ್ಲಿ ರಾಜ್ಯಪಾಲರ ಭೇಟಿ ಮಾಡಲಿದ್ದಾರೆ.
ಇನ್ನೊಂದೆಡೆ, ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದು ದೇವೇಂದ್ರ ಫಡ್ನವೀಸ್ ಅವರನ್ನೇ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಪುನರಾಯ್ಕೆ ಮಾಡಲಾಗಿದೆ.
288 ವಿಧಾನಸಭೆ ಕ್ಷೇತ್ರಗಳ ಪೈಕಿ ಬಿಜೆಪಿ 105, ಶಿವಸೇನೆ 56, ಕಾಂಗ್ರೆಸ್ 44 ಹಾಗೂ ಎನ್ಸಿಪಿ 54 ಕ್ಷೇತ್ರಗಳನ್ನು ಗೆದ್ದುಕೊಂಡಿದೆ.