ಮುಂಬೈ: ಟೀಂ ಇಂಡಿಯಾ ಕೂಲ್ ಕ್ಯಾಪ್ಟನ್ ಎಂದು ಪ್ರಸಿದ್ಧರಾಗಿದ್ದ ಮಹೇಂದ್ರ ಸಿಂಗ್ ಧೋನಿ ನನ್ನ ನೆಚ್ಚಿನ ಕ್ಯಾಪ್ಟನ್ ಹಾಗೂ ರೋಹಿತ್ ಶರ್ಮಾ ನೆಚ್ಚಿನ ಬ್ಯಾಟಿಂಗ್ ಜೊತೆಗಾರ ಎಂದು ಶಿಖರ್ ಧವನ್ ಹೇಳಿದ್ದಾರೆ.
ಇರ್ಫಾನ್ ಪಠಾಣ್ ಜೊತೆ ಲೈವ್ ಚಾಟ್ ನಡೆಸುತ್ತಿದ್ದ ವೇಳೆ ಈ ಮಾಹಿತಿ ನೀಡಿರುವ ಶಿಖರ್ ಧವನ್, ನಾನು ವಿರಾಟ್ ಕೊಹ್ಲಿ ಹಾಗೂ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾದಲ್ಲಿ ಆಡಿದ್ದು, ಇದರಲ್ಲಿ ಧೋನಿ ಭಾಯ್ ನನ್ನ ನೆಚ್ಚಿನ ಕ್ಯಾಪ್ಟನ್ ಎಂದಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿ ಅದ್ಭುತ ಇಂಡಿಯನ್ ಬ್ಯಾಟ್ಸ್ಮನ್ ಎಂದಿದ್ದಾರೆ.
ರೋಹಿತ್ ಶರ್ಮಾ ಓರ್ವ ಅದ್ಭುತ ಬ್ಯಾಟ್ಸಮನ್ ಎಂದಿರುವ ಶಿಖರ್ ಧವನ್, ಕಳೆದ ಐಸಿಸಿ ವಿಶ್ವಕಪ್ ಟೂರ್ನಮೆಂಟ್ನಲ್ಲಿ ಅವರ ನೀಡಿರುವ ಪ್ರದರ್ಶನ ಅದ್ಭುತವಾಗಿತ್ತು ಎಂದಿದ್ದಾರೆ. ಇದೇ ವೇಳೇ ಆಸ್ಟ್ರೇಲಿಯಾದ ವೇಗಿ ಮಿಷಲ್ ಸ್ಟಾರ್ಕ್ ಎದುರಿಸುವುದು ತುಂಬಾ ಕಠಿಣ ಎಂದಿದ್ದಾರೆ.
ಟೀಂ ಇಂಡಿಯಾದ ಆರಂಭಿಕ ಜೋಡಿಯಾಗಿರುವ ಶಿಖರ್ ಧವನ್-ರೋಹಿತ್ ಶರ್ಮಾ ಏಕದಿನ ಹಾಗೂ ಟಿ-20 ಕ್ರಿಕೆಟ್ನಲ್ಲಿ ಜೊತೆಯಾಗಿ ಇನ್ನಿಂಗ್ಸ್ ಆರಂಭಿಸ್ತಿದ್ದು, ನೆಚ್ಚಿನ ಬ್ಯಾಟಿಂಗ್ ಜೋಡಿ ಎಂದು ಗುರುತಿಸಿಕೊಂಡಿದೆ.
ಎಂಎಸ್ ಧೋನಿ ಟೀಂ ಇಂಡಿಯಾ ನಾಯಕನಾಗಿದ್ದ ವೇಳೆ ತಂಡಕ್ಕೆ ಆಗಮಿಸಿದ ಶಿಖರ್ ಧವನ್ 2007ರ ಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವೇಳೆ ಟೀಂ ಇಂಡಿಯಾ ತಂಡದಲ್ಲಿದ್ದರು.
ಇಲ್ಲಿಯವರೆಗೆ 21 ಟೆಸ್ಟ್, 66 ಏಕದಿನ ಪಂದ್ಯ ಹಾಗೂ 24 ಟಿ-20 ಪಂದ್ಯಗಳಲ್ಲಿ ಟೀಂ ಇಂಡಿಯಾ ತಂಡ ಪ್ರತಿನಿಧಿಸಿದ್ದು ಕ್ರಮವಾಗಿ 1419, 2873 ಹಾಗೂ 634ರನ್ಗಳಿಕೆ ಮಾಡಿದ್ದಾರೆ. ಧೋನಿ ನಾಯಕತ್ವದ ವೇಳೆ 12 ಟೆಸ್ಟ್,56 ಏಕದಿನ ಹಾಗೂ 21 ಟಿ20 ಕ್ರಿಕೆಟ್ ಪಂದ್ಯಗಳನ್ನಾಡಿದ್ದಾರೆ.ಇನ್ನು ರೋಹಿತ್ ಶರ್ಮಾ, ಸುರೇಶ್ ರೈನಾ ಹಾಗೂ ರಹಾನೆ ನಾಯಕತ್ವದಲ್ಲೂ ಶಿಖರ್ ಧವನ್ ಕ್ರಿಕೆಟ್ ಪಂದ್ಯಗಳನ್ನಾಡಿದ್ದಾರೆ.