ನವದೆಹಲಿ: ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಅವಶ್ಯಕತೆ ಇದೆ ಎಂದು ಹೇಳಿದ್ದ ನ್ಯಾಷನಲ್ ಕಾಂಗ್ರೆಸ್ ನಾಯಕ ಉಮರ್ ಅಬ್ದುಲ್ಲಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದ್ದು ಇದಕ್ಕೆ ಕಾಂಗ್ರೆಸ್ ಜೊತೆಗಿರುವ ಮಹಾ ಮೈತ್ರಿ ಕೂಟ ಬೆಂಬಲ ನೀಡಲಿದೆಯೇ ಎಂದು ಪ್ರಶ್ನಿಸಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ರಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಈ ಪ್ರಶ್ನೆಗೆ ಉತ್ತರ ಕೊಡಬೇಕು. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ರಕ್ಷಣಾ ಸಚಿವ ಶರದ್ ಪವಾರ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಮಹಾ ಘಟ ಬಂಧನದಲ್ಲಿರುವ ಎಲ್ಲ ನಾಯಕರಿಗೂ ನಾನು ಈ ಪ್ರಶ್ನೆ ಮುಂದಿಡುತ್ತಿದ್ದೇನೆ ಎಂದು ತಿಳಿಸಿದರು.
ಕಾಂಗ್ರೆಸ್ ತನ್ನ ಮೈತ್ರಿ ಕೂಟದಲ್ಲಿರುವ ಯಾವುದೇ ನಾಯಕರು ಈ ರೀತಿಯ ಹೇಳಿಕೆ ನೀಡಿದಾಗ ಮೌನಕ್ಕೆ ಶರಣಾಗುತ್ತದೆ. ಇಂಥ ನಡೆಗಳಿಗೆ ಸಮ್ಮತಿಸುವುದರಿಂದಲೇ ಕಾಶ್ಮೀರದಲ್ಲಿ ಪಾಕ್ ಪರ ಘೋಷಣೆ ಕೂಗುತ್ತಿರುವುದು ಎಂದು ಪಿಎಂ ಕುಟುಕಿದರು.
ನನ್ನ ಅಭಿಮತಕ್ಕೆ ವೇದಿಕೆ ನೀಡಿದ್ದಕ್ಕೆ ಥ್ಯಾಂಕ್ಸ್:
ಉಮರ್ ಪ್ರಧಾನಿ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಶ್ಮೀರದ ನ್ಯಾಷನಲ್ ಕಾಂಗ್ರೆಸ್ ನಾಯಕ ಉಮರ್ ಅಬ್ದುಲ್ಲಾ ನನ್ನ ಅಭಿಮತಕ್ಕೆ ವೇದಿಕೆ ನೀಡಿದ್ದಕ್ಕೆ ಪ್ರಧಾನಿ ಅವರಿಗೆ ನನ್ನ ಧನ್ಯವಾದಗಳು. ಹಾಗೂ ನನ್ನ ಭಾಷಣವನ್ನು ಪತ್ರಕರ್ತರಿಗೆ ವಾಟ್ಸ್ಆ್ಯಪ್ ಮಾಡಿದ ಬಿಜೆಪಿ ಐಟಿ ಸೆಲ್ಗೂ ಕೂಡ ನನ್ನ ಧನ್ಯವಾದಗಳು. ನನ್ನ ಭಾಷಣವನ್ನು ನೀವಿ ನನಗಿಂತ ಚೆನ್ನಾಗಿ ಎಲ್ಲರಿಗೂ ತಲುಪಿಸಿದ್ದೀರ ಎಂದು ಉಮರ್ ಟ್ವೀಟ್ ಮಾಡಿದ್ದಾರೆ.