ಮುಂಬೈ: ಮುಂಬೈ ಷೇರುಪೇಟೆಯ ಮೇಲೆ ಅಮೆರಿಕ- ಚೀನಾ ನಡುವಣ ವಾಣಿಜ್ಯ ಸಮರ ನಕರಾತ್ಮಕ ಪ್ರಭಾವ ಬೀರಿದ್ದು, ಸತತ ಐದನೇ ವಹಿವಾಟಿನಲ್ಲಿಯೂ ಸೆನ್ಸೆಕ್ಸ್ ಇಳಿಕೆ ಕಂಡಿದೆ.
ಮಂಗಳವಾರ ಅಂತ್ಯಗೊಂಡ ವಹಿವಾಟಿನಲ್ಲಿ ಸೂಚ್ಯಂಕ ಮೂರು ತಿಂಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 324 ಅಂಶ ಇಳಿಕೆಯಾಗಿ 38,276 ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 100 ಅಂಶಗಳ ಇಳಿಕೆ ಕಂಡು 11,498 ಅಂಶಗಳ ಮಟ್ಟದಲ್ಲಿ ಕೊನೆಗೊಳಿಸಿದೆ. ಈ ಎರಡು ಸೂಚ್ಯಂಕಗಳು 2019ರ ಫೆಬ್ರವರಿ ನಂತರ ಕನಿಷ್ಠ ಮಟ್ಟದಲ್ಲಿ ದಿನದ ವಹಿವಾಟು ಅಂತ್ಯ ಕಂಡಿವೆ.
ಬ್ಯಾಂಕಿಂಗ್ ಮತ್ತು ಇಂಡಸ್ಟ್ರಿ ಷೇರುಗಳು ಖರೀದಿಯ ಒತ್ತಡಕೆ ಒಳಗಾದವು. ತತ್ಪರಿಣಾಮ ರಿಲಯನ್ಸ್ ಇಂಡಸ್ಟ್ರಿ, ಐಸಿಐಸಿಐ ಬ್ಯಾಂಕ್, ಟಾಟಾ ಮೋಟಾರ್ಸ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಷೇರು ಮೌಲ್ಯ ಕುಸಿದವು.
ಭಾರತದ ಷೇರು ಪೇಟೆಗಳಲ್ಲಿನ ವಹಿವಾಟು ಕೆಲವು ದಿನಗಳಿಂದ ಬಹಳಷ್ಟು ಚಂಚಲವಾಗಿದೆ. ಅಮೆರಿಕ- ಚೀನಾ ನಡುವಿನ ವಾಣಿಜ್ಯ ಸಮರ, ಕೆಲವು ಕಂಪನಿಗಳ ತ್ರೈಮಾಸಿಕ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಇಲ್ಲದೇ ಇರುವುದು ಸಹ ಪೇಟೆ ಮೇಲೆ ನಕರಾತ್ಮಕ ಪರಿಣಾಮ ಬೀರಿದೆ ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಎರಡು ದಿನಗಳ ವಹಿವಾಟಿನಲ್ಲಿ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ₹ 2.5 ಲಕ್ಷ ಕೋಟಿಗಳಷ್ಟು ಕರಗಿದೆ. ಸೋಮವಾರದ ವಹಿವಾಟಿನಲ್ಲಿ ₹ 1.24 ಲಕ್ಷ ಕೋಟಿ ಹಾಗೂ ಮಂಗಳವಾರದ ವಹಿವಾಟಿನಲ್ಲಿ ₹ 1.26 ಲಕ್ಷ ಕೋಟಿಗಳಷ್ಟು ಕರಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 151.61 ಲಕ್ಷ ಕೋಟಿಗಳಿಂದ ₹ 149.11 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ.
ಏಷ್ಯಾದ ಷೇರುಪೇಟಗಳು ಚೇತರಿಕೆ ಹಾದಿಗೆ ಮರಳಿವೆ. ಶಾಂಘೈ ಕಾಂಪೊಸಿಟ್ ಸೂಚ್ಯಂಕ ಏರುಮುಖವಾಗಿ ವಹಿವಾಟು ಅಂತ್ಯಗೊಳಿಸಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 3 ಪೈಸೆ ಇಳಿಕೆ ಕಂಡು ಪ್ರತಿ ಡಾಲರ್ಗೆ ₹ 69.43ರಲ್ಲಿ ವಹಿವಾಟು ನಡೆಸುತ್ತಿದೆ.