ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೇ ಆರಂಭಗೊಂಡಿದ್ದು, ಇದರ ಮಧ್ಯೆ ವಿವಿಧ ಪಕ್ಷದ ಮುಖಂಡರು ಮಾತೃ ಪಕ್ಷಕ್ಕೆ ಕೈ ಕೊಟ್ಟು ಪಕ್ಷಾಂತರ ಮಾಡುತ್ತಿದ್ದಾರೆ. ಸದ್ಯ ಕಾಂಗ್ರೆಸ್, ಆರ್ಜೆಡಿ ಹಾಗೂ ಆರ್ಎಲ್ಎಸ್ಪಿ ಪಕ್ಷದ ಅನೇಕರು ಆಡಳಿತರೂಢ ಪಕ್ಷ ಜೆಡಿಯು ಸೇರಿಕೊಂಡಿದ್ದಾರೆ.
ಆರ್ಜೆಡಿ ಪ್ರಮುಖ ಮುಖಂಡ ಭೋಲಾ ರೈ, ಕಾಂಗ್ರೆಸ್ ಮುಖಂಡರಾದ ಪೂರ್ಣಿಮಾ ಯಾದವ್, ಸುದರ್ಶನ್ ಮತ್ತು ರಾಷ್ಟ್ರೀಯ ಲೋಕ ಸಮತಾ ಪಕ್ಷದ ಮುಖಂಡ ಅಭಿಷೇಕ್ ಜಾ ಇಂದು ಜೆಡಿಯು ಹಿರಿಯ ನಾಯಕ ಲಾಲನ್ ಸಿಂಗ್ ಸಮ್ಮುಖದಲ್ಲಿ ಪಕ್ಷ ಸೇರಿಕೊಂಡಿದ್ದಾರೆ.
ಪಕ್ಷಕ್ಕೆ ಅವರನ್ನ ಸ್ವಾಗತಿಸಿ ಮಾತನಾಡಿದ ಸಿಂಗ್, ಇದು ಕೇವಲ ಟ್ರೈಲರ್ ಎಂದಿದ್ದು, ಮುಂದಿನ ದಿನಗಳಲ್ಲಿ ನಿಜವಾದ ಸಿನಿಮಾ ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ.ಈ ಮೂಲಕ ಬರುವ ದಿನಗಳಲ್ಲಿ ಹೆಚ್ಚಿನ ನಾಯಕರು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಸೇರಿಕೊಳ್ಳಲಿದ್ದಾರೆ ಎಂಬ ಮುನ್ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಆರ್ಜೆಡಿ ತೊರೆದ ಲಾಲು ಆಪ್ತ!
ನಿನ್ನೆಯಷ್ಟೇ ಹಿರಿಯ ಮುಖಂಡ ರಘುವಂಶ್ ಪ್ರಸಾದ್ ಸಿಂಗ್ ಆರ್ಜೆಡಿ ಪಕ್ಷ ತೊರೆದು ಲಾಲು ಪ್ರಸಾದ್ ಯಾದವ್ ಅವರಿಗೆ ಪತ್ರ ಬರೆದಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಲಾಲು ಪ್ರಸಾದ್ ನೀವೂ ಎಲ್ಲಿಗೂ ಹೋಗುತ್ತಿಲ್ಲ ಎಂದು ಹೇಳಿದ್ದರು. ಬಿಹಾರ ಅಸೆಂಬ್ಲಿ ಚುನಾವಣೆ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯಲಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣೆ ಆಯೋಗ ಇಲ್ಲಿಯವರೆಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ.