ಮುಂಬೈ: ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ಮಾಡುವ ಕಸರತ್ತು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಬಿಜೆಪಿಯಿಂದ ಹೊರಬಂದು ಎನ್‌ಸಿಪಿ+ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲು ಮುಂದಾಗಿರುವ ಶಿವಸೇನೆಗೆ ಇದೀಗ 50:50 ಸೂತ್ರವೇ ಮುಳುವಾಗಿದೆ.
ಬಿಜೆಪಿ ಜತೆ 50:50 ಸೂತ್ರಕ್ಕೆ ಪಟ್ಟು ಹಿಡಿದು ಮುಖ್ಯಮಂತ್ರಿ ಪದವಿ ಬಿಟ್ಟುಕೊಡುವಂತೆ ಶಿವಸೇನೆ ಕೇಳಿತ್ತು. ಆದರೆ ಇದಕ್ಕೆ ಬಿಜೆಪಿ ಒಪ್ಪದ ಕಾರಣ ಉದ್ಧವ್ ಠಾಕ್ರೆ ಎನ್‌ಸಿಪಿ+ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚನೆ ಮಾಡುವ ಕಸರತ್ತಿಗೆ ಮುಂದಾದ್ರು.
ಈ ಕುರಿತು ಉದ್ಧವ್ ಠಾಕ್ರೆ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹಾಗೂ ಕಾಂಗ್ರೆಸ್‌ನ ಸೋನಿಯಾ ಗಾಂಧಿ ಜತೆ ಮಾತನಾಡಿದ್ದು, ಇಂದು ಸಹ ಕಸರತ್ತು ಮುಂದುವರಿದಿದೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಶಿವಸೇನೆಗೆ ಬೆಂಬಲ ನೀಡಲು ಮುಂದಾಗಿರುವ ಎನ್‌ಸಿಪಿ ಕೂಡ ಸಿಎಂ ಗಾದಿ ಮೇಲೆ ಕಣ್ಣಿಟ್ಟಿದ್ದು 50:50 ಸೂತ್ರದಂತೆ ಸರ್ಕಾರ ರಚಿಸಲು ಪಟ್ಟು ಹಿಡಿದಿದೆ.
ಮಹಾರಾಷ್ಟ್ರ ಚುನಾವಣೆಗೂ ಮುನ್ನ ಎನ್‌ಸಿಪಿ+ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು ಕ್ರಮವಾಗಿ 56 ಹಾಗೂ 54 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಒಂದು ವೇಳೆ ಶಿವಸೇನೆಗೆ ಸಪೋರ್ಟ್ ಮಾಡಿದರೆ 2.5 ವರ್ಷ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಶರದ್ ಪವಾರ್ ಪಕ್ಷ ಎನ್‌ಸಿಪಿ ಪಟ್ಟು ಹಿಡಿದಿದೆ.
ಈಗಾಗಲೇ ಎನ್‌ಸಿಪಿ-ಕಾಂಗ್ರೆಸ್ ನಡುವೆ ಸಹ ಅನೇಕ ಸುತ್ತಿನ ಮಾತುಕತೆ ನಡೆದಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚನೆಯಂತೆ ಕಾಂಗ್ರೆಸ್ ಹಿರಿಯ ಮುಖಂಡರಾಗಿರುವ ಮಲ್ಲಿಕಾರ್ಜುನ ಖರ್ಗೆ, ಅಹ್ಮದ್ ಪಟೇಲ್ ಮುಂಬೈಗೆ ಆಗಮಿಸುತ್ತಿದ್ದು ಪವಾರ್ ಜತೆ ಅಂತಿಮ ಹಂತದ ಮಾತುಕತೆ ನಡೆಸಲಿದ್ದಾರೆ.