ನವದೆಹಲಿ: ಇತ್ತೀಚೆಗೆ ಯುವಜನತೆಯಲ್ಲಿ ಸೆಲ್ಫಿ ಗೀಳು ಹೆಚ್ಚಾಗಿದ್ದು, ಇದಕ್ಕೆ ಪೂರಕವಾಗಿ ಸ್ಮಾರ್ಟ್ಫೋನ್ಗಳು ಸಹ ತಮ್ಮ ಉತ್ತಮ ದರ್ಜೆಯ ಕ್ಯಾಮರಾಗಳಿರುವ ಮೊಬೈಲ್ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಸೆಲ್ಫಿ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚಿನ ವರದಿಯೊಂದು ಭಯ ಬೀಳುವಂತಿದೆ.
ಹೋದಲ್ಲಿ- ಬಂದಲ್ಲಿ, ಎಲ್ಲೆಂದರಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಒಂದರ್ಥದಲ್ಲಿ ಚಟವಾಗಿ ಮಾರ್ಪಟ್ಟಿದೆ. ಸೆಲ್ಫಿ ತೆಗೆದುಕೊಂಡರೆ ಮಾತ್ರವೇ ಮನಸಿಗೆ ಏನೋ ಒಂಥರಾ ಖುಷಿ. ಈ ಸೆಲ್ಫಿ ಗೀಳಿನ ಮಂದಿ ಈ ಸುದ್ದಿಯನ್ನು ಪೂರ್ತಿಯಾಗಿ ಓದುವುದು ಉತ್ತಮ..
ಸೆಲ್ಫಿ ತೆಗೆಯುವ ವೇಳೆ ನಡೆದ ಸಾವಿನ ಪ್ರಕರಣಗಳು ಶಾರ್ಕ್ ದಾಳಿಯಲ್ಲಿ ಮೃತಪಟ್ಟವರಿಗಿಂತ ಐದು ಪಟ್ಟು ಹೆಚ್ಚಳ ಎನ್ನುವ ಗಂಭೀರ ವಿಚಾರವನ್ನು ಇಂಡಿಯಾಸ್ ಜರ್ನಲ್ ಆಫ್ ಫ್ಯಾಮಿಲಿ ಮೆಡಿಸಿನ್ ಆ್ಯಂಡ್ ಪ್ರೈಮರಿ ಕೇರ್ ತನ್ನ ವರದಿಯಲ್ಲಿ ಹೇಳಿದೆ.
2011ರ ಅಕ್ಟೋಬರ್ನಿಂದ 2017ರ ನವೆಂಬರ್ ಅವಧಿಯಲ್ಲಿ ಸೆಲ್ಫಿ ದುರಂತದಲ್ಲಿ ಕನಿಷ್ಠ 259 ಮಂದಿ ಮೃತಪಟ್ಟಿದ್ದರೆ, ಇದೇ ಅವಧಿಯಲ್ಲಿ ಶಾರ್ಕ್ ದಾಳಿಗೆ ಸತ್ತವರ ಸಂಖ್ಯೆ 50..!
ಇದೇ ವರದಿಯಂತೆ, ಮಹಿಳೆಯರು ಅತೀ ಹೆಚ್ಚಿನ ಸೆಲ್ಫಿ ತೆಗೆದುಕೊಳ್ಳುತ್ತಾರೆ ಎಂದು ತಿಳಿದು ಬಂದಿದ್ದು, ಯುವ ಜನತೆ ಅಪಾಯಕಾರಿ ಸೆಲ್ಫಿ ತೆಗೆಯುತ್ತಾರೆ ಎನ್ನುವುದು ವರದಿಯ ಉಲ್ಲೇಖಾರ್ಹ ಅಂಶ.
ಜನಸಂಖ್ಯೆಯಲ್ಲಿ ವಿಶ್ವದಲ್ಲೇ ದ್ವಿತೀಯ ಸ್ಥಾನ ಹೊಂದಿರುವ ಭಾರತದಲ್ಲಿ ಸುಮಾರು 800( 80 ಕೋಟಿ) ಮಿಲಿಯನ್ ಮಂದಿ ಸ್ಮಾರ್ಟ್ಫೋನ್ ಬಳಕೆ ಮಾಡುತ್ತಿದ್ದು, ಸೆಲ್ಫಿ ದುರಂತದಲ್ಲಿ ಮೊದಲ ಸ್ಥಾನ ಪಡೆದಿದೆ. ಕಳೆದ ಆರು ವರ್ಷದಲ್ಲಿ ಭಾರತದಲ್ಲಿ ಸೆಲ್ಫಿ ದುರಂತದಲ್ಲಿ 159 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಭಾರತ ಸೆಲ್ಫಿ ದುರಂತದಲ್ಲಿ ಮುಂಚೂಣಿಯಲ್ಲಿದ್ದರೆ ಅತ್ತ ರಷ್ಯಾ, ಅಮೆರಿಕ ಹಾಗೂ ಪಾಕಿಸ್ತಾನ ಈ ವಿಚಾರದಲ್ಲಿ ಉತ್ತಮವಾಗಿದೆ. ರಷ್ಯಾದಲ್ಲಿ(16), ಅಮೆರಿಕ ಹಾಗೂ ಪಾಕಿಸ್ತಾನದಲ್ಲಿ ಕಳೆದ ಆರು ವರ್ಷದಲ್ಲಿ 14 ಮಂದಿ ಸೆಲ್ಫಿ ದುರಂತಕ್ಕೆ ಬಲಿಯಾಗಿದ್ದಾರೆ.