ಶ್ರೀನಗರ: ಭಾರತೀಯ ಭದ್ರತಾ ಪಡೆ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಮೂವರು ಹಾಗೂ ಶೋಪಿಯಾನ್ ಜಿಲ್ಲೆಗಳಲ್ಲಿ ಐವರು ಸೇರಿದಂತೆ ಒಟ್ಟು ಎಂಟು ಉಗ್ರರು ಮೃತಪಟ್ಟಿದ್ದಾರೆ.
ನಿನ್ನೆ ಪುಲ್ವಾಮಾ ಜಿಲ್ಲೆಯ ಅವಂತಿಪೋರಾದ ಪಾಂಪೋರ್ ಪ್ರದೇಶದ ಮೀಜ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿತ್ತು. ಆತನ ಹತ್ಯೆ ಬಳಿಕ ಮತ್ತಿಬ್ಬರು ಉಗ್ರರು ಸ್ಥಳೀಯ ಜಾಮಿಯಾ ಮಸೀದಿಗೆ ಪ್ರವೇಶಿಸಿದ್ದು, ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭವಾಯಿತು. ಮಸೀದಿಯೊಳಗೆ ಅಡಗಿಕೊಂಡಿದ್ದ ಅವರನ್ನು ಹೊಡೆದುರುಳಿಸಲಾಗಿದೆ. ಈ ಮೂಲಕ ಪಾಂಪೋರ್ನ ಮೀಜ್ನಲ್ಲಿ ಸೆರೆಸಿಕ್ಕ ಮೂವರು ಉಗ್ರರನ್ನೂ ಹತ್ಯೆ ಮಾಡಿದಂತಾಗಿದೆ ಎಂದು ಜಮ್ಮು-ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
ಇನ್ನು ಶೋಪಿಯಾನ್ ಜಿಲ್ಲೆಯ ಮುನಾಂದ್ ಪ್ರದೇಶದಲ್ಲಿ ಐವರು ಭಯೋತ್ಪಾದಕನನ್ನು ಕೊಲ್ಲಲಾಗಿದೆ. ಈ ಪ್ರದೇಶದಲ್ಲಿ ಮತ್ತಷ್ಟು ಉಗ್ರರು ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಶೋಧ ಕಾರ್ಯ ಮುಂದುವೆರೆಸಿದ್ದೇವೆ ಎಂದು ಡಿಜಿಪಿ ತಿಳಿಸಿದ್ದಾರೆ.