ಹೈದರಾಬಾದ್ : ಕೋವಿಡ್-19 ವೈರಸ್ ಜಗತ್ತನ್ನೇ ಹಿಂಡಿ ಹಿಪ್ಪೆ ಮಾಡುತ್ತಿದೆ. ಇದಕ್ಕಾಗಿ ವ್ಯಾಕ್ಸಿನ್, ಔಷಧಿ ಕಂಡು ಹಿಡಿಯಲು ಜಗತ್ತಿನಾದ್ಯಂತ ಸಾವಿರಾರು ವಿಜ್ಞಾನಿಗಳು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಅದ್ಭುತ ಸಂಶೋಧನೆಯೊಂದು ನಡೆದಿರುವುದಾಗಿ ವರದಿಯಾಗಿದೆ. ಮಾನವ ಜೀವಕೋಶಗಳಿಗೆ ಕೋವಿಡ್ ವೈರಸ್ ದಾಳಿ ಮಾಡದಂತೆ ತಡೆಯುವ ಆ್ಯಂಟಿಬಾಡಿಯನ್ನು (ಪ್ರತಿಕಾಯ) ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಮಾನವನ ಆರೋಗ್ಯವಂತ ಜೀವಕೋಶಗಳಿಗೆ ವೈರಸ್ ದಾಳಿ ಮಾಡದಂತೆ ತಡೆಯುವ ಸಂಪೂರ್ಣ ಮಾನವ ಮೊನೊಕ್ಲೋನಲ್ ಆ್ಯಂಟಿಬಾಡಿ ಇದಾಗಿದೆ ಎಂದು ಎರಾಸ್ಮಸ್ ಮೆಡಿಕಲ್ ಸೆಂಟರ್ ಮತ್ತು ಹಾರ್ಬರ್ ಬಯೊಮೆಡ್ ಉಟ್ರೆಕ್ಟ್ ವಿವಿಯ ವಿಜ್ಞಾನಿಗಳು ಹೇಳಿದ್ದಾರೆ.
ಈಗ ಅಭಿವೃದ್ಧಿಪಡಿಸಲಾದ ಸಂಪೂರ್ಣ ಮಾನವ ಆ್ಯಂಟಿಬಾಡಿ ಸಾಂಪ್ರದಾಯಿಕ ಆ್ಯಂಟಿಬಾಡಿಗಳಿಗಿಂತ ಭಿನ್ನವಾಗಿದೆ. ಸಾಮಾನ್ಯವಾಗಿ ಬೇರೊಂದು ಪ್ರಾಣಿಯ ದೇಹದಲ್ಲಿ ಆ್ಯಂಟಿಬಾಡಿಗಳನ್ನು ಬೆಳೆಸಿ ನಂತರ ಅದನ್ನು ಮನುಷ್ಯನ ಶರೀರದೊಳಗೆ ಸೇರಿಸಲಾಗುತ್ತದೆ. ಆದರೆ, ಈ ಮೊನೊಕ್ಲೋನಲ್ ಆ್ಯಂಟಿಬಾಡಿಯನ್ನು ಮಾನವನ ದೇಹದಲ್ಲೇ ವಿಕಸನಗೊಳಿಸಲಾಗಿದೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎನ್ನಲಾಗಿದೆ.
2002-2003ರಲ್ಲಿ ಕಾಣಿಸಿಕೊಂಡಿದ್ದ SARS-CoV ಸಲುವಾಗಿ ಆ್ಯಂಟಿಬಾಡಿ ಸಂಶೋಧನೆಗಳನ್ನು ಕೈಗೊಂಡ ಸಂಶೋಧಕರ ತಂಡವೇ ಕೋವಿಡ್-19ಗಾಗಿ ಆ್ಯಂಟಿಬಾಡಿ ಸಂಶೋಧನೆಗಳನ್ನು ನಡೆಸಿತ್ತು ಎಂದು ಉಟ್ರೆಕ್ಟ್ ವಿವಿಯ ಪ್ರಾಧ್ಯಾಪಕ ಹಾಗೂ ಸಂಶೋಧನಾ ಮುಖ್ಯಸ್ಥ ಡಾ. ಬೆರೆಂಡ್-ಜಾನ್ ಬಾಶ್ ಹೇಳಿದ್ದಾರೆ.
"ನಮ್ಮ ಸಂಗ್ರಹದಲ್ಲಿದ್ದ SARS-CoV ಆ್ಯಂಟಿಬಾಡಿಗಳನ್ನು ಬಳಸಿ, ಕೋವಿಡ್-19 ವೈರಸ್ ಅನ್ನು ತಟಸ್ಥಗೊಳಿಸುವ ಆ್ಯಂಟಿಬಾಡಿಯೊಂದನ್ನು ನಾವು ಕಂಡುಹಿಡಿದಿದ್ದೇವೆ. ಈ ತಟಸ್ಥ ಆ್ಯಂಟಿಬಾಡಿಯು ವೈರಸ್ ದಾಳಿಯಾಗುವುದನ್ನು, ವೈರಸ್ ನಿರ್ಮೂಲನೆ ಮಾಡುವುದರಲ್ಲಿ ಅಥವಾ ಆರೋಗ್ಯವಂತ ವ್ಯಕ್ತಿಗೆ ವೈರಸ್ ತಗುಲದಂತೆ ತಡೆಯಲು ಸಹಾಯಕವಾಗಲಿದೆ." ಎಂದು ಅವರು ತಿಳಿಸಿದ್ದಾರೆ.
SARS-CoV ಮತ್ತು SARS-CoV-2 ಎರಡೂ ಮಾದರಿಯ ವೈರಸ್ಗಳನ್ನು ತಟಸ್ಥಗೊಳಿಸುವ ಸಾಮರ್ಥ್ಯ ಹೊಸ ಆ್ಯಂಟಿಬಾಡಿಗಿದೆ. ಭವಿಷ್ಯದಲ್ಲಿ ಕೊರೊನಾ ವೈರಸ್ನಿಂದ ಹುಟ್ಟಿಕೊಳ್ಳಬಹುದಾದ ಇತರ ರೋಗಗಳಿಗೂ ಇದನ್ನು ಬಳಸಬಹುದು ಎಂದು ಡಾ. ಬೆರೆಂಡ್-ಜಾನ್ ಬಾಶ್ ಹೇಳಿದ್ದಾರೆ.