ನವದೆಹಲಿ: ಜಾಮೀನಿನ ಮೇಲೆ ಶಾಶ್ವತ ವಿಶ್ರಾಂತಿ ಪಡೆಯಲು ಹೊರಟಿದ್ದ, ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವ ಕರ್ನಾಟಕ ಬಿಜೆಪಿ ಮುಖಂಡ ಗಾಲಿ ಜನಾರ್ಧನ ರೆಡ್ಡಿಗೆ ಈಗ ಮತ್ತೆ ಸಂಕಷ್ಟ ಎದುರಾಗಿದೆ.
ಜಾಮೀನಿನ ಮೇಲೆ ಕರ್ನಾಟಕದ ಬಳ್ಳಾರಿ ಹಾಗೂ ಆಂಧ್ರಪ್ರದೇಶದ ಕಡಪಾ ಜಿಲ್ಲೆಗಳಿಗೆ ಭೇಟಿ ನೀಡಲು ಅವಕಾಶ ಕೋರಿ ಕರ್ನಾಟಕ ಬಿಜೆಪಿ ಮುಖಂಡ ಗಾಲಿ ಜನಾರ್ಧನ ರೆಡ್ಡಿ ಸಲ್ಲಿಸಿದ್ದ ಅರ್ಜಿಯ ವಿರುದ್ಧ ಕೌಂಟರ್ ಅಫಿಡವಿಟ್ ಸಲ್ಲಿಸಲು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಸುಪ್ರೀಂ ಕೋರ್ಟ್ ಹೆಚ್ಚಿನ ಕಾಲಾವಕಾಶ ನೀಡಿದೆ.
2007ರಲ್ಲಿ ಗಾಲಿ ಜನಾರ್ದನ್ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ (ಒಎಂಸಿ) ಮೇಲೆ ನಡೆದಿದ್ದ ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವ ರೆಡ್ಡಿಗೆ 2015 ರಲ್ಲಿ ಸುಪ್ರೀಂ ಕೋರ್ಟ್, ಕರ್ನಾಟಕ ಅಥವಾ ಆಂಧ್ರಪ್ರದೇಶದ ಯಾವುದೇ ಗಣಿಗಾರಿಕೆ ವಲಯಗಳಿಗೆ ಭೇಟಿ ನೀಡಬಾರದು ಎಂಬ ಷರತ್ತಿನ ಮೇರೆಗೆ ಜಾಮೀನು ನೀಡಿತ್ತು. ಆದರೆ ಕಳೆದ ವರ್ಷ, ನ್ಯಾಯಾಲಯವು ಅನಾರೋಗ್ಯದಿಂದ ಬಳಲುತ್ತಿದ್ದ ರೆಡ್ಡಿ ಅವರ ಮಾವನನ್ನು ಬಳ್ಳಾರಿಯಲ್ಲಿ ಭೇಟಿಯಾಗಲು ರೆಡ್ಡಿಗೆ ಎರಡು ವಾರಗಳ ಕಾಲ ಅನುಮತಿ ನೀಡಿತ್ತು. ಅಲ್ಲದೇ ಅವರ ಜಾಮೀನು ನಿರ್ಬಂಧವನ್ನು ಸಡಿಲಗೊಳಿಸಲು ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು.
ಇದರ ವಿರುದ್ಧ ಕೌಂಟರ್ ಅಫಿಡವಿಟ್ ಸಲ್ಲಿಸಲು ಕಾಲಾವಕಾಶ ಕೋರಿ ಸುಪ್ರೀಂಗೆ ಸಿಬಿಐ ಅರ್ಜಿ ಸಲ್ಲಿಸಿತ್ತು. ಇಂದು ಇದರ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ಇಂದಿರಾ ಬ್ಯಾನರ್ಜಿ ನೇತೃತ್ವದ ನ್ಯಾಯಪೀಠವು ಕೌಂಟರ್ ಅಫಿಡವಿಟ್ ಸಲ್ಲಿಸಲು ಸಿಬಿಐಗೆ ಕಾಲವಾಕಾಶ ನೀಡಿ, ವಿಚಾರಣೆಯನ್ನು ಮಾರ್ಚ್ 16 ಕ್ಕೆ ಮುಂದೂಡಿದೆ.