ಕೋಲ್ಕತ್ತಾ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ 20 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಫೆ.16ರಂದು ಬಿಡುಗಡೆಯಾದ ಸಾಮಾಜಿಕ ಹಾಗೂ ರಾಜಕೀಯ ವಿಡಂಬನಾತ್ಮಕ ಸಿನಿಮಾ ಭೋಬಿಶ್ಯೋಟೆರ್ ಭೂತ್ ಎನ್ನುವ ಸಿನಿಮಾವನ್ನು ದೀದಿ ಸರ್ಕಾರ ಬ್ಯಾನ್ ಮಾಡಿತ್ತು.
ಸರ್ಕಾರದ ನಡೆ ರಾಜ್ಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಕಲಾತ್ಮಕ ಸ್ವಾತಂತ್ರ್ಯದ ಹತ್ತಿಕ್ಕುವ ಕೆಲಸ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಆಗುತ್ತಿದೆ ಎನ್ನುವ ಗಂಭೀರ ಆರೋಪ ಹಾಗೂ ಚರ್ಚೆ ಎದ್ದಿತ್ತು.
ಸಿನಿಮಾದಲ್ಲೇನಿತ್ತು..?
ಭೂತದ ಸಮೂಹ ಹಾಗೂ ಓರ್ವ ರಾಜಕಾರಣಿ ನಿರಾಶ್ರಿತರ ಕೇಂದ್ರದಲ್ಲಿ ಒಟ್ಟಾಗುವ ಕಥಾಹಂದರವನ್ನು ಹೊಂದಿತ್ತು. ಸಿನಿಮಾದ ಕಥೆ ಸಾರ್ವಜನಿಕ ಭಾವನೆಗೆ ಧಕ್ಕೆ ತರುತ್ತದೆ ಎನ್ನುವ ಕಾರಣ ನೀಡಿ ಬ್ಯಾನ್ ಮಾಡಲಾಗಿತ್ತು.
ಸರ್ಕಾರದ ನಡೆಯನ್ನು ಸುಪ್ರೀಂ ತರಾಟೆಗೆ ತೆಗೆದುಕೊಂಡಿದ್ದು ಒಂದು ವರ್ಗಕ್ಕಾಗಿ ವಾಕ್ ಸ್ವಾತಂತ್ರ್ಯವನ್ನು ಅಡಗಿಸಲಾಗುವುದಿಲ್ಲ. ಇದು ಅಸಹಿಷ್ಣುತೆಯ ಬೆಳವಣಿಗೆ ಎಂದು ಜಸ್ಟೀಸ್ ಡಿ.ವೈ.ಚಂದ್ರಚೂಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಂಡವನ್ನು ಚಿತ್ರದ ನಿರ್ಮಾಪಕ ಹಾಗೂ ಚಿತ್ರಮಂದಿರಗಳ ಮಾಲೀಕರಿಗೆ ನೀಡಬೇಕು ಎಂದು ಸುಪ್ರೀಂ ಸೂಚಿಸಿದೆ. ಜೊತೆಗೆ ಸಿನಿಮಾ ಪ್ರದರ್ಶನಕ್ಕೆ ಅಡ್ಡಿಪಡಿಸಲು ಅಥವಾ ಬ್ಯಾನ್ ಮಾಡಲು ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎನ್ನುವುದನ್ನೂ ಉಲ್ಲೇಖ ಮಾಡಿ ಆದೇಶಿಸಿದೆ.