ನವದೆಹಲಿ: ನಾಲ್ವರು ನಿರ್ಭಯಾ ಅಪರಾಧಿಗಳ ಗಲ್ಲು ಶಿಕ್ಷೆ ಜಾರಿಗೆ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ತಡೆಯಾಜ್ಞೆ ನೀಡಿದೆ. ಮುಂದಿನ ಆದೇಶದವರೆಗೂ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಬಾರದೆಂದು ಆದೇಶ ನೀಡಿದೆ. ಹೀಗಾಗಿ ನಾಳೆ ಬೆಳಗ್ಗೆ 6 ಗಂಟೆಗೆ ನಿಗದಿಯಾಗಿದ್ದ ಗಲ್ಲು ಶಿಕ್ಷೆ ಜಾರಿ ವಿಳಂಬವಾಗಲಿದೆ.
ಇದಕ್ಕೂ ಮೊದಲು ನಿರ್ಭಯಾ ಅಪರಾಧಿ ಪವನ್ ಗುಪ್ತಾ ಸಲ್ಲಿಸಿದ್ದ ತೀರ್ಪು ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಈ ಹಿಂದೆ ಪವನ್ ಗುಪ್ತಾ ಸೇರಿದಂತೆ ನಾಲ್ಕು ಮಂದಿಗೆ ಮರಣದಂಡನೆ ತೀರ್ಪನ್ನು ಸುಪ್ರೀಂ ವಿಧಿಸಿತ್ತು. ನಾಲ್ವರೂ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ಗೆ ತೀರ್ಪು ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮೇಲ್ಮನವಿಯನ್ನು ವಜಾಗೊಳಿಸಿತ್ತು.
ನಂತರ ಅಪರಾಧಿ ಪವನ್ ಗುಪ್ತಾ ''ತಾನು ಬಾಲಾಪರಾಧಿ, ನನಗೆ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಬೇಕು'' ಎಂದು ಮತ್ತೊಮ್ಮೆ ಸುಪ್ರೀಂ ಕೋರ್ಟ್ಗೆ ಹಿಂದಿನ ತೀರ್ಪನ್ನು ಪರಿಶೀಲಿಸುಂತೆ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನೂ ಕೂಡಾ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಈಗ ಪಟಿಯಾಲಾ ಹೌಸ್ ಕೋರ್ಟ್ ಆದೇಶದಿಂದ ಅಪರಾಧಿಗಳು ನಾಳೆಯ ಮರಣದಂಡನೆಯಿಂದ ಪಾರಾಗಿದ್ದು, ಕಾನೂನಾತ್ಮಕ ಹೋರಾಟ ನಡೆಸಲು ಕೂಡಾ ಅವಕಾಶ ನೀಡಲಾಗಿದೆ.