ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿರುವ 'ಚೌಕಿದಾರ್ ಚೋರ್ ಹೈ' ಹೇಳಿಕೆ ವಿಚಾರವಾಗಿ ಸಲ್ಲಿಕೆಯಾಗಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಜೊತೆಗೆ ಕಾಂಗ್ರೆಸ್ ನಾಯಕನಿಗೆ ಎಚ್ಚರಿಕೆಯನ್ನೂ ನೀಡಿದೆ.
ರಾಹುಲ್ ಗಾಂಧಿಗೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿರುವ ಕೋರ್ಟ್, ಭವಿಷ್ಯದಲ್ಲಿ ನಾವು ಇಂತಹ ಹೇಳಿಕೆಗಳನ್ನು ನೀಡುವಾಗ ಇನ್ನಷ್ಟು ಜಾಗರೂಕರಾಗಬೇಕು ಎಂದು ಹೇಳಿದೆ.
ಈ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯ ಪ್ರಚಾರದ ಭರಾಟೆಯಲ್ಲಿ, ಕಾಂಗ್ರೆಸ್ ನಾಯಕ್ ರಾಹುಲ್ ಗಾಂಧಿ, ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಕಳ್ಳತನ ನಡೆದಿದೆ. ನರೇಂದ್ರ ಮೋದಿ ಇದರಲ್ಲಿ ಪಾಲು ಪಡೆದಿದ್ದಾರೆ. ಹೀಗಾಗಿ 'ಚೌಕಿದಾರ್ ಚೋರ್ ಹೈ' ಎಂದು ಸಾರ್ವಜನಿಕವಾಗಿ ಹೇಳಿದ್ದರು. ಅಲ್ಲದೆ ಇದೇ ನಮ್ಮ ಚುನಾವಣಾ ಸ್ಲೋಗನ್ ಎಂದು ಹೇಳಿಕೊಂಡಿದ್ದರು.
ರಾಹುಲ್ ಗಾಂಧಿ "ಚೌಕಿದಾರ್ ಚೋರ್ ಹೈ" ಹೇಳಿಕೆಗೆ ಸಂಬಂಧಿಸಿದಂತೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿ, ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಕೋರ್ಟ್ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಲೇಖಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಸಾರ್ವಜನಿಕ ಭಾಷಣದಲ್ಲಿ ಮೋದಿ ವಿರುದ್ಧ ತಪ್ಪು ಸಂದೇಶ ರವಾನಿಸಿದ್ದಕ್ಕಾಗಿ ಕ್ಷಮೆ ಕೇಳಬೇಕೆಂದು ಕೋರ್ಟ್ ಗಮನಕ್ಕೆ ತಂದಿದ್ದರು.
ರಾಹುಲ್ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಈ ವಿಚಾರವಾಗಿ ರಾಹುಲ್ ಗಾಂಧಿ ತಪ್ಪೊಪ್ಪಿಕೊಂಡಿದ್ದಾರೆ. ಆದರೂ ಕೋರ್ಟ್ ರಾಹುಲ್ಗೆ ನೋಟಿಸ್ ಜಾರಿಗೊಳಿಸಿದೆ ಎಂದು ವಾದಿಸಿದ್ದರು.
ಇದನ್ನು ಅಲ್ಲಗಳೆದ ನ್ಯಾಯಾಲಯ, ರಾಹುಲ್ ಗಾಂಧಿ ಈ ವಿಚಾರವಾಗಿ ತಪ್ಪೊಪ್ಪಿಕೊಂಡಿರಬಹುದು. ಆದರೆ ತಪ್ಪೊಪ್ಪಿಗೆ ಮತ್ತು ಕ್ಷಮೆ ಒಂದೇ ಅಲ್ಲ ಎಂದು ಪ್ರತಿಪಾದಿಸಿತ್ತು.
ಹೀಗಾಗಿ ರಾಹುಲ್ ಗಾಂಧಿ ನೀಡಿದ ಕ್ಷಮೆಯಾಚನೆಯನ್ನು ಸ್ವೀಕರಿಸದೆ, ಕಾನೂನಿನ ಪ್ರಕಾರ ಅವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೆ, ರಾಹುಲ್ ತಮ್ಮ ಪೂರ್ವಾಗ್ರಹ ಪೀಡಿತ ಹೇಳಿಕೆಯಿಂದ ಸಾರ್ವಜನಿಕರ ಮನಸ್ಸಿನಲ್ಲಿ ನಕಾರಾತ್ಮಕ ಅಭಿಪ್ರಾಯ ಮೂಡಿಸಿದ್ದಾರೆ. ಹೀಗಾಗಿ ಅವರು ಕ್ಷಮೆ ಕೇಳಬೇಕು ಎಂದು ರೋಹ್ಟಗಿ ವಾದಿಸಿದ್ದರು.
ಈ ಬಳಿಕ ಸುಪ್ರೀಂ ಕೋರ್ಟ್ ಮುಂದೆ ಕ್ಷಮೆ ಕೇಳಿದ ರಾಗಾ, ತಾನು ಚುನಾವಣಾ ಪ್ರಚಾರದ ಭರಾಟೆಯಲ್ಲಿ ಈ ಹೇಳಿಕೆ ನೀಡಿದ್ದಾಗಿ ಹೇಳಿದ್ದರು. ಆದರೆ ಈ ಬಗ್ಗೆ ತನ್ನ ಅಂತಿಮ ತೀರ್ಪನ್ನು ಘನ ನ್ಯಾಯಾಲಯ ಕಾಯ್ದಿರಿಸಿತ್ತು. ಇಂದು ಸರ್ವೋಚ್ಛ ನ್ಯಾಯಾಲಯ ನ್ಯಾಯಾಂಗ ನಿಂದನೆ ಅರ್ಜಿಯನ್ನು ರದ್ದುಗೊಳಿಸಿದೆ.