ನವದೆಹಲಿ : ಸುಪ್ರೀಂಕೋರ್ಟ್ ಶುಕ್ರವಾರ ತಮಿಳುನಾಡು ಸರ್ಕಾರಕ್ಕೆ ಮದ್ಯವನ್ನು ಮಾರಾಟ ಮಾಡುವ ವಿಧಾನಗಳನ್ನು ರೂಪಿಸಲು ಅನುಮತಿ ನೀಡಿದೆ. ರಾಜ್ಯದಲ್ಲಿ ಮದ್ಯವನ್ನು ಆನ್‌ಲೈನ್ ಮೂಲಕ, ಭೌತಿಕ ರೂಪದಲ್ಲಿ ಅಥವಾ ಯಾವುದೇ ರೂಪದಲ್ಲಿ ಮಾರಾಟ ಮಾಡಬಹುದು. ಇದರ ನಿರ್ಧಾರ ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದಾಗಿದೆ. ಈ ವಿಚಾರದಲ್ಲಿ ಕೋರ್ಟ್ ಮಧ್ಯ ಪ್ರವೇಶಿಸುವ ಅಗತ್ಯವಿಲ್ಲ ಎಂದು ತಿಳಿಸಿದೆ.
ರಾಜ್ಯದಲ್ಲಿ ಆಲ್ಕೋಹಾಲುಕ್ತ ಪಾನೀಯಗಳನ್ನು ಮಾರಾಟ ಮಾಡುವ ರಾಜ್ಯ ಸರ್ಕಾರದ ಸಂಸ್ಥೆಯಾದ ತಮಿಳುನಾಡು ರಾಜ್ಯ ಮಾರ್ಕೇಟಿಂಗ್ ಕಾರ್ಪೊರೇಷನ್ (ಟ್ಯಾಸ್ಮಾಕ್) ವಾದವನ್ನು ಉನ್ನತ ನ್ಯಾಯಾಲಯ ಒಪ್ಪಿಕೊಂಡಿದೆ. ಈ ಕುರಿತ ನಿರ್ಧಾರವನ್ನು ರಾಜ್ಯ ಸರ್ಕಾರದ ಜವಾಬ್ದಾರಿಗೆ ಬಿಟ್ಟಿದೆ.
ಮೇ 15ರಂದು ಮದ್ರಾಸ್ ಹೈಕೋರ್ಟ್ ಆದೇಶವನ್ನು ತಡೆಹಿಡಿಯುವ ಮೂಲಕ ಉನ್ನತ ನ್ಯಾಯಾಲಯವು ತಮಿಳುನಾಡಿನಲ್ಲಿ ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟವನ್ನು ಮತ್ತೆ ತೆರೆಯಲು ದಾರಿ ಮಾಡಿಕೊಟ್ಟಿತು. ಆದರೆ, ಕೋವಿಡ್-19 ಮುನ್ನೆಚ್ಚರಿಕಾ ಮಾರ್ಗಸೂಚಿಗಳ ಉಲ್ಲಂಘನೆಯಾಗಿತ್ತು ಎಂಬ ಕಾರಣಕ್ಕೆ ಮತ್ತೆ ಅವುಗಳನ್ನು ಮುಚ್ಚಲು ಆದೇಶಿಸಿತ್ತು.