ನವದೆಹಲಿ: ಭ್ರಷ್ಟಾಚಾರ ಮತ್ತು ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾದ ಅಪರಾಧಿಗೆ ವಿಶೇಷ ಕಾನೂನುಗಳ ಅಡಿಯಲ್ಲಿ ವಿವಿಧ ಜೈಲುಗಳಲ್ಲಿರುವವರಿಗೆ ಶಿಕ್ಷೆ ವಿಧಿಸುವ ಕುರಿತು ಸಲ್ಲಿಸಿದ್ದ ಅರ್ಜಿಯನ್ನು ನಾಲ್ಕು ವಾರಗಳ ಬಳಿಕ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.
ವಕೀಲ ಅಶ್ವಿನ್ ಉಪಾಧ್ಯಯ್ ಸಲ್ಲಿಸಿದ ಮನವಿಯನ್ನು ಪರಿಗಣಿಸಿದ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠ, ತುರ್ತು ವಿಚಾರಣೆ ಅಗತ್ಯವಿದೆ ಎಂದು ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು.
ಈ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ನೀಡಿರುವ ಎಲ್ಲ ಪ್ರತಿಕ್ರಿಯೆಗಳು ಪೂರ್ಣಗೊಂಡಿವೆ. ವಿಚಾರಣೆಗಾಗಿ ಅವುಗಳನ್ನು ಪಟ್ಟಿ ಮಾಡಲಾಗಿದೆ ಎಂದು ಅಶ್ವಿನ್ ಹೇಳಿದರು.
'ನಾಲ್ಕು ವಾರಗಳ ನಂತರ ಈ ವಿಷಯವನ್ನು ಪಟ್ಟಿ ಮಾಡೋಣ' ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸೂರ್ಯ ಕಾಂತ್ ಅವರನ್ನೂ ಒಳಗೊಂಡ ನ್ಯಾಯಪೀಠ ಹೇಳಿದೆ.
ಬೇರೆ, ಬೇರೆ ಪ್ರಕರಣಗಳಲ್ಲಿ ಅಪರಾಧಿ ಭಾಗಿಯಾಗಿದ್ದರೆ, ಏಕಕಾಲದಲ್ಲಿ ಆತನಿಗೆ ವಿವಿಧ ಜೈಲುಗಳಲ್ಲಿ ಶಿಕ್ಷೆ ವಿಧಿಸುವ ಕ್ರಿಮಿನಲ್ ಪ್ರೊಸೀಜರ್ ಕೋಡ್ ನಿಬಂಧನೆಯು ಘೋರ ಪ್ರಕರಣಗಳಲ್ಲಿ ಭಾಗಿಯಾಗುವ ಅಪರಾಧಿಗೆ ಅನ್ವಯಿಸಬಾರದು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ), ಭ್ರಷ್ಟಾಚಾರ ತಡೆ ಕಾಯ್ದೆ (ಪಿಸಿಎ), ಬೇನಾಮಿ ಆಸ್ತಿ ವಹಿವಾಟು ನಿಷೇಧ ಕಾಯ್ದೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ), ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ (ಎಫ್‌ಸಿಆರ್‌ಎ), ಕಪ್ಪು ಹಣ ಮತ್ತು ತೆರಿಗೆ ವಿಧಿಸುವಿಕೆ ಕಾಯ್ದೆ ಮತ್ತು ಪರಾರಿಯಾಗುವ ಆರ್ಥಿಕ ಅಪರಾಧಿಗಳ ಕಾಯ್ದೆ ಮುಂತಾದ ವಿಶೇಷ ಕಾನೂನುಗಳಿಗೆ ಸಿಆರ್‌ಪಿಸಿಯ ಸೆಕ್ಷನ್ 31 ಅನ್ವಯವಾಗಬಾರದು ಎಂದು ಪಿಐಎಲ್ನಲ್ಲಿ ವಾದಿಸಲಾಗಿತ್ತು.