ಚೆನ್ನೈ: ಕಳೆದ ವರ್ಷ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 2009ರ ಕರ್ನಾಟಕ ಬ್ಯಾಚ್ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ರಾಜಕೀಯಕ್ಕೆ ಧುಮುಕಲು ಸಿದ್ಧರಾಗಿದ್ದು, ಇಂದು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮಾಜಿ ಐಎಎಸ್ ಅಧಿಕಾರಿ, "ಹೋರಾಟವನ್ನು ಮುಂದುವರೆಸುವ ನನ್ನ ಪ್ರಯತ್ನದಲ್ಲಿ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಲು ನಿರ್ಧರಿಸಿದ್ದೇನೆ ಎಂದು ಎಲ್ಲರಿಗೂ ತಿಳಿಸಲು ಬಯಸುತ್ತೇನೆ. ನಾನು ಎಲ್ಲಿದ್ದರೂ ನನ್ನ ಜೀವನದುದ್ದಕ್ಕೂ ಕೆಳ ಸಮುದಾಯದ ಜನರ ಧ್ವನಿಯಾಗಲು ಪ್ರಯತ್ನಿಸುತ್ತಿರುವ ಕಾರ್ಯಕರ್ತನಾಗಿದ್ದೇನೆ ಮತ್ತು ನನ್ನ ಕೊನೆಯ ಉಸಿರಿರುವವರೆಗೂ ಅದೇ ರೀತಿ ಮುಂದುವರಿಯುತ್ತೇನೆ" ಎಂದಿದ್ದಾರೆ.
ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಸಿಕಾಂತ್ ಸೆಂಥಿತ್ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ.
ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಸಿಕಾಂತ್ ಸೆಂಥಿಲ್, 2019ರ ಸೆ.6ರಂದು ವೈಯಕ್ತಿಕ ಕಾರಣದಿಂದ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದರು.
'ಸಿಂಗಂ' ಅಣ್ಣಾಮಲೈ ಬೆನ್ನಲ್ಲೇ ಮತ್ತೊಬ್ಬ ದಕ್ಷ ಅಧಿಕಾರಿ ಡಿಸಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ
ರಾಜೀನಾಮೆ ಪತ್ರದಲ್ಲಿ, "ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ರಾಜಿ ಮಾಡಿಕೊಂಡು ಕರ್ತವ್ಯ ನಿರ್ವಹಿಸುವುದು ಅನೈತಿಕವಾದದ್ದು. ದೇಶದಲ್ಲಿ ಮುಂದಿನ ದಿನಗಳು ಇನ್ನೂ ಕಷ್ಟಕರವಾಗಲಿದೆ. ಅದಕ್ಕಾಗಿ ಐಎಎಸ್ ನಿಂದ ಹೊರಗಿರಲು ನಿರ್ಧರಿಸಿದ್ದೇನೆ" ಎಂದು ಉಲ್ಲೇಖಿಸಿದ್ದರು.