ಕೋಲ್ಕತಾ : ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಸಿಐಡಿ ಹೆಚ್ಚುವರಿ ಮಹಾನಿರ್ದೇಶಕ/ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಸಿಬಿಐ ಕೆಲವು ದಾಖಲೆಗಳನ್ನು ಕಳುಹಿಸಿದೆ.
ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಹಾಜರಾಗುವಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಕೋಲ್ಕತಾದ ಮಾಜಿ ಪೊಲೀಸ್ ಆಯುಕ್ತ/ ಪ್ರಸ್ತುತ ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್ಮೆಂಟ್ನ (ಸಿಐಡಿ) ಹೆಚ್ಚುವರಿ ಮಹಾನಿರ್ದೇಶಕ ರಾಜೀವ್ ಕುಮಾರ್ ಅವರಿಗೆ ಸಮನ್ಸ್ ನೀಡಿತ್ತು. ಆದರೆ, ಅವರು ಈ ವಿಚಾರಣೆಗೆ ಗೈರು ಹಾಜರಾಗಿದ್ದರು.
ರಾಜೀವ್ ಕುಮಾರ್ ಕಚೇರಿಯಲ್ಲಿ ಸಿಬಿಐ ಅಧಿಕಾರಿಗಳು ದಾಖಲೆಗಳನ್ನು ನೀಡಿದ್ದಾರೆ. ಈ ದಾಖಲೆಗಳು ಸಮನ್ಸ್ ಅಲ್ಲ. ಹೊಸದಾಗಿ ಯಾವುದೇ ಸಮನ್ಸ್ ನೀಡಿಲ್ಲ. ತನಿಖೆಗೆ ಸಂಬಂಧಿಸಿದ ದಾಖಲೆಗಳಾಗಿವೆ ಎಂದು ಸಿಐಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶಾರದಾ ಚಿಟ್ ಫಂಡ್ ಹಗರಣದ ತನಿಖೆಯನ್ನು ಸಿಬಿಐ ವಹಿಸಿಕೊಳ್ಳುವ ಮುನ್ನ ರಾಜೀವ್ ಕುಮಾರ್ ಅವರು ನೇತೃತ್ವ ವಹಿಸಿಕೊಂಡಿದ್ದರು. ಹೀಗಾಗಿ, ರಾಜೀವ್ ಅವರನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಸಿಬಿಐ ಕೋರಿತ್ತು. ಈ ಕುರಿತು ಸುಪ್ರೀಂಕೋರ್ಟ್ನಲ್ಲಿ ಕಳೆದ ತಿಂಗಳು ಸಿಬಿಐ ಮನವಿ ಸಲ್ಲಿಸಿತ್ತು. ಜೊತೆಗೆ ತನಿಖೆಗೆ ರಾಜೀವ್ ಸಹಕರಿಸದೆ ತಪ್ಪಿಸಿಕೊಳ್ಳುತ್ತಿದ್ದಾರೆ. ವಿಚಾರಣೆಯಲ್ಲಿ ಕೇಳುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲ್ಲ ಎಂದು ಆಪಾದಿಸಿತ್ತು.
2014ರಲ್ಲಿ ಸಿಬಿಐ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧ ತನಿಖೆ ಆರಂಭಿಸಿತ್ತು. ಈ ವೇಳೆ 17 ಲಕ್ಷ ಠೇವಣಿದಾರರು ಶಾರದಾ ಚಿಟ್ ಫಂಡ್ನಲ್ಲಿ ಒಟ್ಟು ₹ 3,500 ಕೋಟಿಯಷ್ಟು ಠೇವಣಿ ಇರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಫಂಡ್ನ ಸಂಸ್ಥಾಪಕ ಸುದಿಪ್ತೊ ಸೇನ್ ಅವರು ಸಿಬಿಐಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದರು.