ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯ ಸಮಾಜವಾದಿ ಪಕ್ಷದ ಯುವ ಘಟಕದ ಕಾರ್ಯಕರ್ತರು ನಿರ್ವಹಿಸುತ್ತಿರುವ ಕೆಲವು ಅಂಗಡಿಗಳಲ್ಲಿ ಆಧಾರ್ ಕಾರ್ಡ್ ಅಡವಾಗಿ ಇಟ್ಟುಕೊಂಡು ಸಾಲದ ಮೇಲೆ ಈರುಳ್ಳಿ ನೀಡಲಾಗುತ್ತಿದೆ.
ದೇಶಾದ್ಯಂತ ಈರುಳ್ಳಿ ಬೆಲೆ ತೀವ್ರವಾಗಿ ಏರಿಕೆಯಾಗಿದ್ದು, ವಾರಣಾಸಿಯಲ್ಲಿ ಎಸ್ಪಿ ಕಾರ್ಯಕರ್ತರು ಈ ನಿರ್ಧಾರಕ್ಕೆ ಮುಂದಾಗಿದ್ದಾರೆ.
ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಕೆಜಿಗೆ 100-130 ರೂಪಾಯಿ ಇದೆ. ಬಡ ಹಾಗೂ ಮಧ್ಯಮ ವರ್ಗದ ಜನರ ಕಣ್ಣಲ್ಲಿ ಈರುಳ್ಳಿ ಹೆಸರು ಕೇಳಿಯೇ ನೀರು ಬರುವಂತಾಗಿದೆ. ಈ ಪರಿಸ್ಥಿತಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿಫಲತೆಯೇ ಕಾರಣ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.
ಹೀಗಾಗಿ ಅಷ್ಟೊಂದು ಹಣ ಕೊಟ್ಟು ಈರುಳ್ಳಿ ಖರೀದಿಸಲಾಗದ ಜನರು ಈ ಅಂಗಡಿಗಳಲ್ಲಿ ತಮ್ಮ ಆಧಾರ್ ಕಾರ್ಡ್ ಅಡ ಇಟ್ಟು, ಸಾಲದ ರೂಪದಲ್ಲಿ ಈರುಳ್ಳಿ ಪಡೆಯಬಹುದಾಗಿದೆ.