ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಹಿಂದಿಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ರೈಸಿಂಗ್ ಸ್ಟಾರ್- 3 ವಿಜೇತ ತಂದೆಯ ಸಾಲ ತೀರಿಸಲು ನೆರವಾಗಿದ್ದಾರೆ.
ಪಂಜಾಬ್ನ ಫರೀದ್ಕೋಟ್ ಮೂಲದ 12 ವರ್ಷದ ಗಾಯಕ ಅಫ್ತಬ್ ಸಿಂಗ್, ರೈಸಿಂಗ್ ಸ್ಟಾರ್- 3 ಶೋನ ವಿಜೇತರಾದರು. ಈ ರಿಯಾಲಿಟಿ ಶೋಗೆ ಇತ್ತೀಚೆಗೆ ಅತಿಥಿಯಾಗಿ ಸಲ್ಮಾನ್ ಬಂದಿದ್ದರು. ಈ ವೇಳೆ, 'ಅಫ್ತಬ್ ತಂದೆ ಮಹೇಶ್ ಸಿಂಗ್ ಅವರು ತೀವ್ರ ಆರ್ಥಿಕ ಸಂಕಷ್ಟದ ಮಧ್ಯೆಯೂ ಮಗನನ್ನು ಶೋಗೆ ಕರೆ ತಂದಿದ್ದಾರೆ. ಮನೆಯ ಚಾವಣೆ ದುರಸ್ತಿಗಾಗಿ ₹ 3 ಲಕ್ಷ ಸಾಲ ಮಾಡಿದ್ದರು' ಎಂದು ಕಾರ್ಯಕ್ರಮದ ನಿರೂಪಕ ಹೇಳಿದ್ದರು.
ವಿಷಯ ತಿಳಿಯುತಲ್ಲೇ ಮಹೇಶ್ ಮಾಡಿದ್ದ ಸಾಲದ ಹಣ ತೀರಿಸುವುದಾಗಿ ಸಲ್ಮಾನ್ ಖಾನ್ ಹೇಳಿದ್ದರು. ಅದರಂತೆ ಶೋನಲ್ಲಿ ಜಯ ಸಾಧಿಸಿದ ಅಫ್ತಬ್ ₹ 12 ಲಕ್ಷ ಪಡೆದಿದ್ದರೇ ಅವರ ತಂದೆಗೆ ಸಲ್ಮಾನ್ ಅವರು ₹ 3 ಲಕ್ಷ ನೀಡಿದ್ದಾರೆ ಎಂಬುದು ವರದಿಯಾಗಿದೆ.
ಅಂತಿಮ ಸುತ್ತಿಗೆ ತಲುಪಿದ ಮೂವರಲ್ಲಿ ಅಫ್ತಬ್ ಅತ್ಯಂತ ಕಿರಿಯ ವಯಸ್ಸಿನವ. ಈ ವೇಳೆ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅಫ್ತಬ್, ''ನನ್ನ ತಂದೆಯೇ ನನ್ನ ಸ್ಫೂರ್ತಿಯಾಗಿದ್ದಾರೆ. ಅವರು ಜೀವನದಲ್ಲಿ ಬಹಳಷ್ಟು ಹೋರಾಟ ಮಾಡುತ್ತಿದ್ದಾರೆ. ನಾನು ಶ್ರೀಮಂತ ಕುಟುಂಬಕ್ಕೆ ಸೇರಿದವನಲ್ಲ. ನನ್ನ ತಂದೆಯ ಕಠಿಣ ಕೆಲಸವನ್ನು ನೋಡಿತ್ತಾ ಬೆಳೆದಿದ್ದೇನೆ. ನಾನು ಈ ಸ್ಥಾನಕ್ಕೆ ಬಂದು ತಲುಪಲು ಅವರು ಸಾಕಷ್ಟು ಶ್ರಮವಹಿಸಿದ್ದಾರೆ. ಇದು ನನ್ನ ಗೆಲುವಲ್ಲ. ನನ್ನ ತಂದೆಯ ಗೆಲುವು'' ಎಂದು ತಂದೆ ಶ್ರಮ ಗುಣಗಾನ ಮಾಡಿದ್ದಾರೆ.
''ಶೋನಲ್ಲಿ ಬಂದ ಹಣವನ್ನು ನನ್ನ ಅಕ್ಕಂದಿರ ಮದುವೆಗೆ ನೆರವಾಗಲೆಂದು ನನ್ನ ಪೋಷಕರಿಗೆ ನೀಡುತ್ತೇನೆ'' ಎಂದು ಅಫ್ತಬ್ ಹೇಳಿದ್ದಾನೆ.