ಕೊಯಂಬತ್ತೂರ್ (ತಮಿಳುನಾಡು): ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಅವರ ಚಿತ್ರಕಲೆಯೂ ದಾಖಲೆ ಬೆಲೆಗೆ ಮಾರಾಟವಾಗಿದೆ. 5x5 ಅಡಿ ಅಳತೆಯ ಅಮೂರ್ತ ಕಲ್ಪನೆಯ ಚಿತ್ರಕ್ಕೆ 4.14 ಕೋಟಿ ರೂಪಾಯಿ ಸಿಕ್ಕಿದೆ. ಈ ಚಿತ್ರಕಲೆಯನ್ನು ಸೇಲ್ ಮಾಡಿ ಬಂದ ಹಣವನ್ನು ಕೊರೊನಾ ನಿಧಿಗೆ ನೀಡುವುದಾಗಿ ಸದ್ಗುರು ಘೋಷಿಸಿದ್ದರು.
ಸದ್ಗುರು ಚಿತ್ರಿಸಿದ್ದ ಚಿತ್ರದಿಂದ ಸಂಗ್ರಹಿಸಿದ ಹಣವನ್ನು ತಮಿಳುನಾಡಿನ ಗ್ರಾಮೀಣ ಭಾಗದ ಇಶಾ ಫೌಂಡೇಶನ್ ಯೋಗ ಕೇಂದ್ರದ ಸುತ್ತಮುತ್ತ ಕೊರೊನಾ ವಿರುದ್ಧದ ಹೋರಾಟಕ್ಕೆ ಬಳಸಲು ನಿರ್ಧರಿಸಲಾಗಿದೆ.
ಇತ್ತೀಚಿಗೆ ಯಾರು ಕೊರೊನಾ ನಿಧಿಗೆ ಅತೀ ಹೆಚ್ಚು ದೇಣಿಗೆ ನೀಡುತ್ತಾರೋ ಅವರಿಗೆ ಈ ಚಿತ್ರಕಲೆ ಸಿಗಲಿದೆ ಎಂದು ಘೋಷಿಸಿದ್ದರು. ಅಲ್ಲದೆ ಈ ವರ್ಣಚಿತ್ರದ ಸಣ್ಣ ಪ್ರತಿಗಳೂ ಸಹ ಖರೀದಿದಾರರಿಗೆ ಲಭ್ಯವಿರಲಿದೆ ಎಂದಿದ್ದರು.
ಸರ್ಕಾರ ಮತ್ತು ಆಡಳಿತಗಳು ಸಮಾಜದ ಅತ್ಯಂತ ಕೆಳ ಬಡವರನ್ನು ತಲುಪಲು ಶ್ರಮ ಪಡುತ್ತಿದ್ದಾರೆ. ಇನ್ನೂ ಅನೇಕರು ಇದರಿಂದ ಹೊರಗುಳಿದಿದ್ದಾರೆ. ಯಾರೂ ಹಸಿವಿನಿಂದ ಬಳಲುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಸದ್ಗುರು ಹೇಳಿದ್ದಾರೆ.